ತುಮಕೂರು: ದೇಶದ ಪ್ರತಿಯೊಬ್ಬ ಪ್ರಜೆಗೂ ಉಚಿತವಾಗಿ ವ್ಯಾಕ್ಸಿನ್ ದೊರೆಯಬೇಕು, ದರ ನಿಗದಿಪಡಿಸಬಾರದು ಎಂಬ ಉದ್ದೇಶ ಕಾಂಗ್ರೆಸ್ ಪಕ್ಷದ್ದಾಗಿದ್ದು, ಪ್ರತಿಪಕ್ಷದ ಈ ನಿಲುವನ್ನು ಸರ್ಕಾರ ಪರಿಗಣಿಸಬೇಕು ಇಲ್ಲದಿದ್ದರೆ ಅಧಿಕಾರ ಬಿಟ್ಟು ಹೋಗಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಆಗ್ರಹಿಸಿದ್ದಾರೆ.
ನಗರದಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ವ್ಯಾಕ್ಸಿನ್ ನೀಡಿಕೆಯಲ್ಲಿ ಹಾಗೂ ಸೋಂಕು ಹರಡುವಿಕೆ ನಿಯಂತ್ರಿಸುವಲ್ಲಿ ಸರ್ಕಾರ ಎಡವುತ್ತಿದ್ದು ಇದನ್ನು ಸರಿಪಡಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಪ್ರತಿಪಕ್ಷ ಪಕ್ಷವು ಆಗ್ರಹಿಸುತ್ತಿದೆ. ಇದನ್ನು ಕೇವಲ ಟೀಕೆ-ಟಿಪ್ಪಣಿಗೆ ಮಾಡುತ್ತಿಲ್ಲ ಎಂದು ತಿಳಿಸಿದರು.
ದೇಶದ ಪ್ರತಿಯೊಬ್ಬ ಪ್ರಜೆಗೂ ಉಚಿತವಾಗಿ ವ್ಯಾಕ್ಸಿನ್ ಕೊಡಲು ಸಾಧ್ಯವಾಗದಿದ್ದರೆ ನಮ್ಮ ಕಾಂಗ್ರೆಸ್ ಪಕ್ಷದ ವತಿಯಿಂದ ಈಗಾಗಲೇ ಘೋಷಣೆ ಮಾಡಿರುವಂತೆ 100 ಕೋಟಿ ರೂ. ಬಳಸಿ ವ್ಯಾಕ್ಸಿನ್ ಕೊಡಲು ಅನುಮತಿ ನೀಡಬೇಕು. ಇದಕ್ಕೆ ಸರ್ಕಾರ ಇದುವರೆಗೂ ಉತ್ತರ ನೀಡಿಲ್ಲ ಎಂದು ತಿಳಿಸಿದರು. ಖಾಸಗಿಯವರಿಗೆ ವ್ಯಾಕ್ಸಿನ್ ನೀಡಲು ದರ ನಿಗದಿಪಡಿಸಲು ಅನುಮತಿಸಲಾಗಿದೆ. ಆದರೆ, ಸರ್ಕಾರಕ್ಕೆ ಜನರಿಗೆ ಉಚಿತವಾಗಿ ನೀಡಲು ಯಾಕೆ ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದರು.
ನುರಿತ ತಜ್ಞರು ಈಗಾಗಲೇ ತಿಳಿಸಿರುವಂತೆ ಪ್ರತಿಯೊಬ್ಬರಿಗೂ ವ್ಯಾಕ್ಸಿನ್ ನೀಡಿದರೆ ಸೋಂಕು ಹರಡುವಿಕೆಯನ್ನು ತಡೆಗಟ್ಟಬಹುದಾಗಿದೆ ಎಂಬುದನ್ನು ಮನಗಾಣಬೇಕು. ಮೊದಲನೆಯ ಸಂದರ್ಭದಲ್ಲಿ ತಜ್ಞರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದ ಎರಡನೇ ಅಲೆಯಲ್ಲಿ ಪರಿವರ್ತಿತ ಗುಣ ಲಕ್ಷಣಗಳು ಕಂಡು ಬರುತ್ತವೆ ಎಂಬ ಮಾತನ್ನು ಸರ್ಕಾರ ಪರಿಗಣಿಸಲಿಲ್ಲ ಎಂದು ಇದೇ ವೇಳೆ ಹೇಳಿದ್ರು.