ತುಮಕೂರು/ಪಾವಗಡ: ಚಿತ್ರದುರ್ಗ ಸಂಸದ ಎ.ನಾರಾಯಣಸ್ವಾಮಿ ಪೆಮ್ಮನಹಳ್ಳಿ ಗೊಲ್ಲರಹಟ್ಟಿಗೆ ದಲಿತನೆಂಬ ಕಾರಣಕ್ಕೆ ಪ್ರವೇಶ ನಿರಾಕರಣೆ ಮಾಡಿದ ಪ್ರಕರಣ ಹಿನ್ನೆಲೆಯಲ್ಲಿ ಗೊಲ್ಲರಹಟ್ಟಿಯ ಸಮುದಾಯ ತಮ್ಮ ಸ್ವಾಮೀಜಿ ನೇತೃತ್ವದಲ್ಲಿ ಮುಖಂಡರ ಸಭೆ ನಡೆಸಿತು.
ಸಭೆಯಲ್ಲಿ ಮಾತನಾಡಿದ ಶ್ರೀಕೃಷ್ಣ ಯಾದವನಂದ ಸ್ವಾಮೀಜಿ, ಶಿಕ್ಷಣವಿಲ್ಲದೆ ಹಿಂದಿನ ಕಾಲದಿಂದಲೂ ಮೂಢನಂಬಿಕೆಗಳು ಯಾದವ ಸಮುದಾಯದಲ್ಲಿ ಬೇರೂರಲು ಕಾರಣವಾಗಿತ್ತು. ಇತ್ತೀಚೆಗೆ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಮೂಢನಂಬಿಕೆಗಳು ಮಾಯವಾಗಿವೆ. ಸಂಸದರನ್ನು ಈ ಗ್ರಾಮಕ್ಕೆ ಮತ್ತೆ ಕರೆಸಿ ಗ್ರಾಮದ ಸರ್ವತೋನ್ಮುಖ ಅಭಿವೃದ್ದಿಗೆ ನಾಂದಿ ಹಾಡಲಾಗುವುದು ಎಂದರು.
ಪೆಮ್ಮನಹಳ್ಳಿ ಗೊಲ್ಲರಹಟ್ಟಿಗೆ ಮಾಜಿ ಸಂಸದರಾದ ಚಂದ್ರಪ್ಪರವರು ಕೂಡ ಭೇಟಿ ನೀಡಿದ್ದರು. ನಾರಾಯಣಸ್ವಾಮಿ ಭೇಟಿ ನೀಡುವುದರಲ್ಲಿ ತಪ್ಪೇನಿದೆ. ಹಾಲಿ ಸಂಸದರನ್ನು ವಿರೋಧಿಸುವ ಹಾಗಿದ್ದರೆ ನಾವು ಮತ ಹಾಕುತ್ತಿರಲಿಲ್ಲ ಎಂದು ಸ್ಥಳೀಯರು ಕೂಡ ಘಟನೆ ಬಳಿಕ ಹೇಳಿಕೆ ನೀಡಿದ್ದರು.