ತುಮಕೂರು: ಕರ್ನಾಟಕ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಲದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ದಿನಗೂಲಿ ನೌಕರರು ಹಾಗೂ ಪಿಂಚಣಿ ವಂಚಿತ ನಿವೃತ್ತಿ ನೌಕರರು ಪ್ರತಿಭಟನೆ ನಡೆಸಿದರು.
ರಾಜ್ಯ ಸರ್ಕಾರಿ ಇಲಾಖೆಗಳಲ್ಲಿ, ನಿಗಮಗಳಲ್ಲಿ, ಜಿಲ್ಲಾ ಪಂಚಾಯ್ತಿಗಳಲ್ಲಿ ಜಾರಿಯಾಗಿರುವ ಹೊರಗುತ್ತಿಗೆಯಡಿ ನೌಕರರನ್ನು ನೇಮಿಸುವ ಪದ್ಧತಿಯನ್ನು ರದ್ದುಗೊಳಿಸಬೇಕು, ಈಗ ಹೊರಗುತ್ತಿಗೆ ಮೇಲೆ ಕೆಲಸ ನಿರ್ವಹಿಸುತ್ತಿರುವ ಎಲ್ಲ ಗುತ್ತಿಗೆ ನೌಕರರನ್ನು ನೇರ ಸರ್ಕಾರಿ ನೌಕರರೆಂದು ಪರಿವರ್ತಿಸಿ ಅವರೆಲ್ಲರಿಗೂ ಸರ್ಕಾರವೇ ನೇರವಾಗಿ ವೇತನವನ್ನು ನೀಡಬೇಕು, ಈ ರೀತಿಯ ಕಾರ್ಯ ಮಾಡುವುದರಿಂದ ಗುತ್ತಿಗೆದಾರರಿಂದ ಕಿರುಕುಳಕ್ಕೆ ಒಳಗಾಗುತ್ತಿರುವ ಗುತ್ತಿಗೆ ನೌಕರರಿಗೆ ಪರಿಹಾರ ನೀಡಿದಂತಾಗುತ್ತದೆ ಎಂದು ಪ್ರತಿಭಟಿಸಿದರು.
ಹೊರಗುತ್ತಿಗೆ ನೌಕರರು ಹತ್ತು ಹದಿನೈದು ವರ್ಷಗಳಿಂದ ಕೆಲಸ ಮಾಡುತ್ತಿದ್ದು, ಎಲ್ಲಾ ನೌಕರರನ್ನು ಸರ್ಕಾರದ ಇಲಾಖೆಗಳಲ್ಲಿ ಅಥವಾ ನಿಗಮಗಳಲ್ಲಿ ಕಾಯಂ ನೌಕರರೆಂದು ಪರಿಗಣಿಸುವ ಮೂಲಕ ಅವರಿಗೆ ಕಾಯಂ ನೌಕರರಿಗೆ ನೀಡುವ ಎಲ್ಲ ಸೌಲಭ್ಯಗಳನ್ನು ವಿಸ್ತರಿಸಬೇಕು, ಕ್ಷೇಮಾಭಿವೃದ್ಧಿ ನೌಕರರಿಗೆ ರಾಜ್ಯ ಸರ್ಕಾರದ ಕಾಯಂ ನೌಕರರಿಗೆ ಜಾರಿಗೊಳಿಸಿದ ಆರನೇ ವೇತನ ಆಯೋಗದ ಪರಿಷ್ಕೃತ ವೇತನವನ್ನು ಜಾರಿ ಮಾಡಬೇಕು ಎಂಬ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲೆಯ ನೂರಾರು ನೌಕರರು ಪ್ರತಿಭಟನೆ ನಡೆಸಿದರು.
ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಮೂರು ರೀತಿಯಲ್ಲಿ ಪ್ರತಿಭಟನೆ ನಡೆಸಲಾಗುತ್ತಿದ್ದು, ಮೊದಲನೇ ರೀತಿಯಾಗಿ ಎಲ್ಲಾ ಶಾಸಕರುಗಳ ಮನೆ ಮುಂದೆ ಜನವರಿ 5ರಂದು ಒಂದು ದಿನದ ಧರಣಿ ನಡೆಸಲಾಗಿತ್ತು, ಇಗ ಎರಡನೇ ರೀತಿಯಾಗಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುತ್ತಿದೆ, ನಮ್ಮ ಬೇಡಿಕೆಗಳು ಈಡೇರದಿದ್ದರೆ ಅಥವಾ ಮುಖ್ಯಮಂತ್ರಿಗಳು ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಮಾರ್ಚ್ 11ರಿಂದ ಮೂರು ದಿನಗಳ ಕಾಲ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ತಿಳಿಸಿದರು.