ತುಮಕೂರು: ಎರಡನೇ ಅಲೆ ಕೋವಿಡ್ ಅಟ್ಟಹಾಸಕ್ಕೆ ರಾಜ್ಯ ನಡುಗಿದೆ. ಪ್ರತೀ ಕ್ಷೇತ್ರದ ಮೇಲೂ ತನ್ನ ಪರಿಣಾಮ ಬೀರಿದ್ದು, ಇದ್ರಿಂದ ಮಡಿಕೆ ವ್ಯಾಪಾರ-ವಹಿವಾಟು ಕೂಡ ಹೊರತಲ್ಲ. ಪರಿಣಾಮ ಕುಂಬಾರರು, ಮಡಿಕೆ ಮಾರಾಟ ಮಾಡುವವರು ಸಂಕಷ್ಟಕ್ಕೊಳಗಾಗಿದ್ದಾರೆ.
ಪ್ರಸ್ತುತ ಸಂದರ್ಭದಲ್ಲಿ ಜನರು ಆರೋಗ್ಯದ ಬಗ್ಗೆ ಸಾಕಷ್ಟು ಕಾಳಜಿ ವಹಿಸುತ್ತಿದ್ದಾರೆ. ಮುಖ್ಯವಾಗಿ ಬಿಸಿ ನೀರಿನ ಬಳಕೆ ಹೆಚ್ಚುತ್ತಿದೆ. ಈ ಪರಿಸ್ಥಿತಿಯು ಬೇಸಿಗೆಯಲ್ಲಿ ಹೆಚ್ಚಾಗಿ ಬಳಕೆಯಲ್ಲಿರೋ ಮಡಿಕೆ ವ್ಯಾಪಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.
ಹೌದು, ಸಾಮಾನ್ಯವಾಗಿ ಬೇಸಿಗೆಯಲ್ಲಿ ಜನರು ತಂಪು ಪಾನೀಯ ಹಾಗೂ ತಂಪು ನೀರಿನ ಮೊರೆ ಹೋಗೋದು ಸಾಮಾನ್ಯ. ಫ್ರಿಡ್ಜ್ ನೀರಿಗಿಂತ ಮಡಿಕೆ ನೀರಿನ್ನೇ ಕುಡಿಯಲು ಬಹುತೇಕ ಮಂದಿ ಬಯಸುತ್ತಿದ್ದರು. ಆದ್ರೆ ಈ ಬಾರಿ ಜನರು ತಂಪು ನೀರಿಗೆ ಅಷ್ಟಾಗಿ ಮಹತ್ವ ಕೊಡುತ್ತಿಲ್ಲ. ಕೊರೊನಾ ವೇಳೆ ತಂಪು ನೀರಿಗಿಂತ ಬಿಸಿ ನೀರು ಕುಡಿಯಬೇಕೆಂಬ ಸಂದೇಶದ ಹಿನ್ನೆಲೆ ಜನರು ಹೆಚ್ಚಾಗಿ ಬಿಸಿ ನೀರು ಬಳಸುತ್ತಿದ್ದಾರೆ. ಹೀಗಾಗಿ ಮಡಿಕೆ ಖರೀದಿಸಲು ಜನರು ಸುಳಿಯುತ್ತಿಲ್ಲ.
ಕೋವಿಡ್ ನಿಯಂತ್ರಣಕ್ಕೆ ಜನತಾ ಕರ್ಫ್ಯೂ ಬಳಿಕ ಇದೀಗ ಲಾಕ್ಡೌನ್ ಜಾರಿಯಾಗಿದೆ. ನಿಗದಿತ ವೇಳೆಯಲ್ಲಿ ಅಗತ್ಯ ವಸ್ತುಗಳನ್ನು ಖರೀದಿಸಬೇಕಾಗಿರುವ ಕಾರಣ ಮಡಿಕೆ ವ್ಯಾಪಾರ-ವಹಿವಾಟು ಉತ್ತಮ ರೀತಿಯಲ್ಲಿ ಆಗುತ್ತಿಲ್ಲ.
ಇದನ್ನೂ ಓದಿ: ತಂಪು ನೀರು ಕುಡಿದರೆ ಶೀತ, ನೆಗಡಿ ಭಯ: ಕುಂಬಾರರ ಬದುಕಿಗೆ ಬರೆ ಎಳೆದ ಕೋವಿಡ್
ಕಳೆದ ವರ್ಷ ಸಹ ಈ ಸಂದರ್ಭದಲ್ಲಿ ಇದೇ ರೀತಿಯ ಪರಿಸ್ಥಿತಿ ನಿರ್ಮಾಣವಾಗಿತ್ತು. ಈಗಾಗಲೇ ಸಾಕಷ್ಟು ನಷ್ಟ ಅನುಭವಿಸಿ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಮಡಿಕೆ ವ್ಯಾಪಾರಸ್ಥರಿಗೆ ಇದೀಗ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹೀಗಾಗಿ ರಾಶಿ ರಾಶಿ ಮಡಿಕೆಗಳು ಮಾರಾಟವಾಗದೆ ಹಾಗೆಯೇ ಉಳಿದುಕೊಂಡಿವೆ.