ತುಮಕೂರು: ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟಲು ಸರ್ಕಾರ ಜಾರಿಗೆ ತಂದಿರೋ ಮಾರ್ಗಸೂಚಿಗಳನ್ನು ಪಾಲನೆ ಮಾಡುವಂತೆ ಜಿಲ್ಲಾ ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಅರಿವು ಮೂಡಿಸುತ್ತಿದ್ದರೂ ಜನರು ಸ್ಪಂದಿಸುತ್ತಿಲ್ಲ. ಇನ್ನೊಂದೆಡೆ ಕಠಿಣ ಕ್ರಮ ತೆಗೆದುಕೊಂಡರೆ ಪೊಲೀಸರ ಮೇಲೆಯೇ ಕೆಟ್ಟ ಅಭಿಪ್ರಾಯ ಮೂಡುತ್ತಿದೆ. ಹೀಗಾಗಿ ಪೊಲೀಸರು ಸಹ ಸಾರ್ವಜನಿಕರಿಗೆ ವಿಭಿನ್ನ ರೀತಿಯಲ್ಲಿ ಜಾಗೃತಿ ಮೂಡಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.
ಜಾಗೃತಿ ಗೀತೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವ ಪ್ರಯತ್ನಕ್ಕೆ ಪೊಲೀಸರು ಕೈ ಹಾಕಿದ್ದಾರೆ. ತುಮಕೂರಿನ ಬೆಳ್ಳಾವಿ ಪೊಲೀಸ್ ಠಾಣೆ ಹೆಡ್ ಕಾನ್ಸ್ಟೇಬಲ್ ರಮೇಶ್ ಎಂಬುವರು ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟಲು ಸರ್ಕಾರದ ನಿಯಮಾವಳಿಗಳನ್ನು ಪಾಲಿಸುವಂತೆ ಜನರ ಮನಮುಟ್ಟುವಂತೆ ಹಾಡಿದ್ದಾರೆ.
ನಂದಿಕೋಲು ರಮೇಶ್ ಸಾಹಿತ್ಯ ರಚಿಸಿದ್ದಾರೆ. ಇನ್ನು ಈ ಹಾಡನ್ನು ಸಾಮಾಜಿಕ ಜಾಲತಾಣದಲ್ಲಿ ಅತಿ ಹೆಚ್ಚು ಜನ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷ ಕೊರೊನಾ ಸೋಂಕು ಹರಡುವಿಕೆ ಭೀತಿಯಿಂದ ಇದುವರೆಗೂ ಎರಡು ಹಾಡುಗಳನ್ನು ಹಾಡಿರುವ ರಮೇಶ್, ಈ ಬಾರಿ ಮೂರನೇ ಹಾಡನ್ನು ಹಾಡಿದ್ದಾರೆ. ಅದನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿ ಕೃಷ್ಣ ಬಿಡುಗಡೆ ಮಾಡಿದ್ದಾರೆ.