ತುಮಕೂರು: ಕುಣಿಗಲ್ ಪುರಸಭೆಯ 18ನೇ ವಾರ್ಡ್‌ನ ನಗರೋತ್ಥಾನ ಯೋಜನೆ ಕಾಮಗಾರಿ ವಿಚಾರದಲ್ಲಿ ನಮ್ಮನ್ನು ಪರಿಗಣಿಸಿಲ್ಲ ಎಂದು ಆರೋಪಿಸಿದ ಪುರಸಭೆ ಜೆಡಿಎಸ್ ಸದಸ್ಯ ಶ್ರೀನಿವಾಸಮೂರ್ತಿ ಭೂಮಿ ಪೂಜೆಗೆ ಅಡ್ಡಿಪಡಿಸಿ ಶಾಸಕರೊಂದಿಗೆ ವಾಗ್ವಾದ ನಡೆಸಿದರು.
ಕಾಂಗ್ರೆಸ್ ಶಾಸಕ ರಂಗನಾಥ್ ಕಾಮಗಾರಿಯ ಭೂಮಿಪೂಜೆಗೆ ಬಂದಾಗ ಹೌಸಿಂಗ್ ಬೋರ್ಡ್ ರಸ್ತೆ ಅಭಿವೃದ್ಧಿಗೆ ಪಟ್ಟಿ ಸಲ್ಲಿಸಿದ್ದು, ಅಧಿಕಾರಿಗಳು ಶಾಸಕರ ಬೆಂಬಲಿಗನೊಬ್ಬನ ಪ್ರಭಾವಕ್ಕೆ ಮಣಿದು ನಿಗದಿತ ಪಟ್ಟಿ ಕೈಬಿಟ್ಟು, ಬೇರೆ ರಸ್ತೆಗಳನ್ನು ಅಂತಿಮ ಕ್ಷಣದಲ್ಲಿ ಸೇರಿಸಿದ್ದಾರೆ. ನಮ್ಮ ಗಮನಕ್ಕೆ ಬಾರದೆ ಕಾಮಗಾರಿಯ ಪೂಜೆಗೆ ವ್ಯವಸ್ಥೆ ಮಾಡಿದ್ದಾರೆ ಎಂದು ಆರೋಪಿಸಿ ಪೂಜೆಗೆ ಶ್ರೀನಿವಾಸಮೂರ್ತಿ ಅಡ್ಡಿಪಡಿಸಿದರು. ಒಂದು ಹಂತದಲ್ಲಿ ಇಬ್ಬರು ಹಾಲಿ ಹಾಗೂ ಮಾಜಿ ಸದಸ್ಯರು ಕೈಕೈ ಮಿಲಾಯಿಸುವ ಹಂತ ತಲುಪಿದರು.
ಪುರಸಭೆ ಮಾಜಿ ಸದಸ್ಯ ಪಾಪಣ್ಣ ಮತ್ತು ಹಾಲಿ ಶ್ರೀನಿವಾಸ ಮೂರ್ತಿ ನಡುವೆ ಮಾತಿನ ಚಕಮಕಿ ನಡೆಯಿತು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಒಂದು ರೀತಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಶಾಸಕ ರಂಗನಾಥ ಅವರು ಎಷ್ಟೇ ಸಮಾಧಾನಪಡಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಹಾಲಿ ಹಾಗೂ ಮಾಜಿ ಸದಸ್ಯರು ಪರಸ್ಪರ ಏಕವಚನದಲ್ಲೇ ನಿಂದಿಸಿದರು. ಒಂದು ಹಂತದಲ್ಲಿ ಕಾರ್ಯಕ್ರಮ ಮುಂದುವರಿಯಲು ಬಿಡುವುದೇ ಇಲ್ಲ ಎಂದು ಶ್ರೀನಿವಾಸ ಮೂರ್ತಿ ಪಟ್ಟು ಹಿಡಿದು ಕುಳಿತರು. ಇದರಿಂದ ಕಕ್ಕಾಬಿಕ್ಕಿಯಾದ ಶಾಸಕ ರಂಗನಾಥ್ ಸಾಕಷ್ಟು ಮನವೊಲಿಸಲು ಪ್ರಯತ್ನಿಸಿದರು.
ಪುರಸಭೆ ಅಧ್ಯಕ್ಷ ರಂಗಸ್ವಾಮಿ ಮಧ್ಯಪ್ರವೇಶಿಸಿ ಇಬ್ಬರನ್ನೂ ಸಮಾಧಾನಪಡಿಸಿದರು. ಸ್ಥಳೀಯ ಚುನಾಯಿತ ಜನಪ್ರತಿನಿಧಿಯನ್ನು ಆಹ್ವಾನಿಸದೆ ಕಾರ್ಯಕ್ರಮ ಆಯೋಜನೆ ಮಾಡಿರುವ ಪುರಸಭೆಯ ಅಧಿಕಾರಿಗಳನ್ನು ಸ್ಥಳದಲ್ಲಿಯೇ ತರಾಟೆಗೆ ತೆಗೆದುಕೊಂಡರು. ಶಾಸಕ ಡಾ.ರಂಗನಾಥ್ 18ನೇ ವಾರ್ಡ್ ರಸ್ತೆ ಅಭಿವೃದ್ಧಿಗೆ ಹೆಚ್ಚುವರಿ ಅನುದಾನ ನೀಡಿ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಿದ ನಂತರ ಪೂಜೆ ಮಾಡಲಾಯಿತು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕುಣಿಗಲ್ ಕಾಂಗ್ರೆಸ್ ಶಾಸಕ ಡಾ.ರಂಗನಾಥ್, ಸ್ಥಳೀಯವಾಗಿ ನಡೆಯುವ ಸರ್ಕಾರಿ ಕಾರ್ಯಕ್ರಮಗಳಿಗೆ ಸ್ಥಳೀಯ ಚುನಾಯಿತ ಜನಪ್ರತಿನಿಧಿಗಳಿಗೆ ಅಧಿಕೃತ ಆಹ್ವಾನ ನೀಡಬೇಕು. ಪುರಸಭೆ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಈ ರೀತಿಯ ಗೊಂದಲ ನಿರ್ಮಾಣವಾಗಿದೆ. ನಾನು ಸ್ಥಳೀಯ ಯಾವುದೇ ಚುನಾಯಿತ ಜನಪ್ರತಿನಿಧಿಗಳನ್ನು ಕಡೆಗಣನೆ ಮಾಡಿಲ್ಲ. ಎಲ್ಲಾ ಚುನಾಯಿತ ಜನ ಪ್ರತಿನಿಧಿಗಳನ್ನು ಕಾರ್ಯಕ್ರಮಗಳಿಗೆ ಆಹ್ವಾನಿಸಬೇಕೆಂದು ಅನೇಕ ಬಾರಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಹೀಗಿದ್ದರೂ ಇಂತಹ ಗೊಂದಲಗಳಿಗೆ ಅಧಿಕಾರಿಗಳು ಎಡೆಮಾಡಿಕೊಡುತ್ತಿದ್ದಾರೆ. ಇಂತಹ ಗೊಂದಲಗಳು ಪುನಃ ನಿರ್ಮಾಣವಾಗಬಾರದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ಇದನ್ನೂ ಓದಿ: ಬಾಗಲಕೋಟೆ: ನಗರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರ ಮಾತಿನ ಚಕಮಕಿ