ಪಾವಗಡ: ಅಜ್ಜಂಪುರದಿಂದ ವಾಣಿ ವಿಲಾಸ ಸಾಗರಕ್ಕೆ ನೀರು ಬಿಡುವ ಕಾರ್ಯಕ್ರಮಕ್ಕೆ ಅಕ್ಟೋಬರ್ 1 ರಂದು ಮುಖ್ಯಮಂತ್ರಿ ಚಾಲನೆ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಚಿತ್ರದುರ್ಗ ಸಂಸದ ಎ. ನಾರಾಯಣ ಸ್ವಾಮಿ ಪಾವಗಡಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.
ಪಾವಗಡ ತಾಲೂಕಿನಲ್ಲಿ ಹರಿಯುವ ಉತ್ತರ ಪಿನಾಕಿನಿ ನದಿ ಪರಿಶೀಲಿಸಿದ ಅವರು, ನೆರೆಯ ಆಂಧ್ರಪ್ರದೇಶ ಸರ್ಕಾರ ಕೈಗೆತ್ತಿಕೊಂಡಿರುವ ಯೋಜನೆಯಿಂದ ಪಾವಗಡ ಮೂಲಕ ನೀರು ಹರಿಯಲಿದೆ. ಹೀಗಾಗಿ ಇಲ್ಲಿನ ಸುಮಾರು 70 ಗ್ರಾಮಗಳಲ್ಲಿ ಅಂತರ್ಜಲ ವೃದ್ಧಿಯಾಗಿ, ಪಟ್ಟಣದ ಜನತೆಗೆ ಶುದ್ಧ ಕುಡಿಯುವ ನೀರು ಸಿಗಲಿದೆ ಎಂದರು.
ತುಂಗಭದ್ರಾ ಯೋಜನೆ ಹಾಗೂ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಇರುವ ಸಮಸ್ಯೆಗಳನ್ನು ಸರಿಪಡಿಸಿ ಕಾಮಗಾರಿಗೆ ವೇಗ ನೀಡಲಾಗುವುದು ಎಂದು ಹೇಳಿದ್ರು.
ಆಂಧ್ರದ ಈ ಹಿಂದಿನ ಶಾಸಕ ಪರಿಟಾಲ ಸುನಿತಾರವರು ಯೋಜನೆ ಜಾರಿಗೊಳಿಸಿ ಪಾವಗಡಕ್ಕೆ ನೀರು ಕೋಡದೆ, ಪೆರೂರು ಡ್ಯಾಂಗೆ ನೀರು ತುಂಬಿಸಲು ಮುಂದಾಗಿದ್ದರು. ಆದರೆ ಇಂದಿನ ರಾಪ್ತಾಡು ಕ್ಷೇತ್ರದ ಶಾಸಕರಾದ ತೋಪುದರ್ತಿ ಪ್ರಕಾಶ್ ರೆಡ್ಡಿ ಪಾವಗಡ ಜನತೆಗೆ ಕುಡಿಯುವ ನೀರು ನೀಡುವ ನಿಟ್ಟಿನಲ್ಲಿ ಕಾಮಗಾರಿ ಕೈಗೆತ್ತಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.