ತುಮಕೂರು: ನಾಡಿನಲ್ಲಿ ಆದಂತಹ ಪ್ರವಾಹ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿವೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಕಿಡಿಕಾರಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿಯಿಂದ ತೊಂದರೆಯಾಗಿದೆ. ಅದನ್ನು ಸಮರ್ಪಕವಾಗಿ ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ಹಿಂದೆ ಬಿದ್ದಿದೆ. ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದ್ದು, ಪ್ರವಾಹ ಉಂಟಾಗಿ ಅನೇಕ ದಿನಗಳು ಕಳೆದರೂ ಕೇಂದ್ರ ಸರ್ಕಾರ ಬಿಡಿಗಾಸನ್ನೂ ನೆರೆ ಸಂತ್ರಸ್ತರಿಗೆ ಬಿಡುಗಡೆಗೊಳಿಸಿಲ್ಲ ಎಂದು ಹರಿಹಾಯ್ದರು.
ನನ್ನ ಪ್ರಕಾರ ಒಂದು ಲಕ್ಷ ಕೋಟಿಯಷ್ಟು ಪ್ರವಾಹ ಪರಿಸ್ಥಿತಿಯಿಂದ ಹಾನಿಯಾಗಿದೆ. ಬೆಳೆಗಳು, ರಸ್ತೆ, ಮನೆ, ಶಾಲೆ ವಿದ್ಯುತ್ ಸಂಪರ್ಕ ಹಾಗೂ ಅನೇಕ ಹಳ್ಳಿಗಳು ನಾಶವಾಗಿವೆ. ಎಲ್ಲವನ್ನು ಪುನಃ ಮೊದಲಿನ ಸ್ಥಿತಿಗೆ ತರಲು ಎಷ್ಟು ಹಣದ ಅವಶ್ಯಕತೆ ಇದೆ ಎಂಬುದರ ಬಗ್ಗೆ ಗಂಭೀರವಾಗಿ ಅರ್ಥೈಸಿಕೊಂಡು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ರಾಜ್ಯದ ಸಂಸದರು ಕೇಂದ್ರ ಸರ್ಕಾರದ ಮೇಲೆ ಪರಿಹಾರಕ್ಕೆ ಒತ್ತಡ ತರಬೇಕಿದೆ ಎಂದರು.