ತುಮಕೂರು: ಚಾಲಕನ ನಿಯಂತ್ರಣ ತಪ್ಪಿ ಕಾರು, ಸುಮಾರು ಹತ್ತು ಅಡಿ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಮೂವರು ಮೃತಪಟ್ಟು ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತುಮಕೂರು ಜಿಲ್ಲೆ ಶಿರಾ ತಾಲೂಕಿನ ಚಿಕ್ಕಸಂದ್ರ ಬಳಿ ನಡೆದಿದೆ.
ಮೃತರನ್ನು ಕೋಡಿಹಳ್ಳಿ ಗ್ರಾಮದ ಬಸವರಾಜ (25), ಬರಗೂರು ಗ್ರಾಮದ ವಿನಯ್ (25), ಸುಮನ್ ಬಾಬು (25) ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ನೂತನ್ ಮತ್ತು ಸಚಿನ್ ಎಂಬುವರನ್ನು ಶಿರಾ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ಭಾರಿ ಮಳೆ ಬರುತ್ತಿದ್ದ ಹಿನ್ನೆಲೆಯಲ್ಲಿ ಸರಿಯಾಗಿ ರಸ್ತೆ ಕಾಣದೆ ಅಪಘಾತ ಸಂಭವಿಸಿದೆ ಎಂದು ಗಾಯಾಳುಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾರಿಗುಡ್ಡ ದೇವಸ್ಥಾನಕ್ಕೆ ಹೋಗಿ ವಾಪಸ್ ಶಿರಕ್ಕೆ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ. ಈ ಸಂಬಂಧ ಶಿರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್ ಗಳ ನಡುವೆ ಡಿಕ್ಕಿ, ನಾಲ್ವರಿಗೆ ಗಾಯ:
ಎರಡು ಬೈಕ್ಗಳ ನಡುವೆ ಸಂಭವಿಸಿದ ಮತ್ತೊಂದು ಅಪಘಾತದಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಚಿಕ್ಕಸಂದ್ರಕಾವಲ್ ಬಳಿ ನಡೆದಿದೆ. ಗಾಯಾಳುಗಳನ್ನು ಬೋರಸಂದ್ರ ಗ್ರಾಮದ ನವ್ಯ ಮತ್ತು ಗಿರೀಶ್ ಎಂದು ಗುರುತಿಸಲಾಗಿದೆ ಇವರು ಬೋರಸಂದ್ರದಿಂದ ಕಂಬದಹಳ್ಳಿಗೆ ಹೋಗುತ್ತಿದ್ದರು. ಮತ್ತೊಂದು ಬೈಕ್ನಲ್ಲಿ ಹುಳಿಯಾರಿನ ವೀಣಾ ಮತ್ತು ಆಕೆಯ ಗಂಡ ತಿಪ್ಪೇಸ್ವಾಮಿ ಹೋಗುತ್ತಿದ್ದರು. ಭಾರಿ ಮಳೆ ಹಿನ್ನೆಲೆಯಲ್ಲಿ ರಸ್ತೆ ಸರಿಯಾಗಿ ಕಾಣದೆ ಬೈಕ್ ಅಪಘಾತ ಸಂಭವಿಸಿದೆ. ಈ ಸಂಬಂಧ ಶಿರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.