ತುಮಕೂರು: ಜಿಲ್ಲೆಯ ತಿಪಟೂರು ತಾಲೂಕಿನ 94 ಕೆರೆಗಳಿಗೆ ನೀರು ತುಂಬಿಸಲು 200 ಕೋಟಿ ರೂ. ವೆಚ್ಚದ ಯೋಜನೆಗೆ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿರುವುದು ತಾಲೂಕಿನ ಜನರಿಗೆ ಸಂತಸ ತಂದಿದೆ.
ಇನ್ನೊಂದೆಡೆ ಕೆರೆಗಳಿಗೆ ಹೇಮಾವತಿ ಜಲಾಶಯದಿಂದ ನೀರು ನಿಗದಿಮಾಡಲಾಗಿದೆ. ಆದರೆ ಈ ಯೋಜನೆಗೆ ಹೇಮಾವತಿ ಹಾಗೂ ಎತ್ತಿನಹೊಳೆಯಿಂದ ಎಷ್ಟು ನೀರು ಹರಿದು ಬರಲಿದೆ ಎಂಬುದರ ಕುರಿತು ಈವರೆಗೆ ಸ್ಪಷ್ಟನೆ ದೊರೆತಿಲ್ಲ.
ಎತ್ತಿನಹೊಳೆ ಯೋಜನೆ ಮತ್ತು ಹೇಮಾವತಿ ಕಾಲುವೆಯಲ್ಲಿನ ನೀರನ್ನು ಬಳಸಿಕೊಂಡು ಈ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ಬರಪೀಡಿತ ತಿಪಟೂರು ಜಿಲ್ಲೆಯ ನೀರಿನ ಸಮಸ್ಯೆಗೆ ಈ ಯೋಜನೆಯಿಂದ ಬಹುತೇಕ ಪರಿಹಾರ ದೊರಕಲಿದೆ. ಹೇಮಾವತಿ ನಾಲೆಯ ನೀರು ಹಾದು ಹೋಗುವ ಮಾರ್ಗ ಮತ್ತು ಎತ್ತಿನಹೊಳೆ ಮುಖ್ಯ ಕಾಲುವೆ ಹಾದು ಹೋಗುವ ಮಾರ್ಗದಲ್ಲಿ ಸಣ್ಣ ನೀರಾವರಿ ಇಲಾಖೆಯ ಮೂಲಕ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ.
ಇದಕ್ಕಾಗಿ 200 ಕೋಟಿ ರೂ. ವೆಚ್ಚ ಮಾಡುವುದಕ್ಕೆ ಸಂಪುಟ ಸಭೆ ಆಡಳಿತಾತ್ಮಕ ಒಪ್ಪಿಗೆ ನೀಡಿದೆ. ಎರಡು ಕಾಲುವೆಗಳಿಗೆ ಸ್ಥಳೀಯ ಕುಡಿಯುವ ನೀರು ಮತ್ತು ಅಂತರ್ಜಲ ಮಟ್ಟ ಹೆಚ್ಚಿಸುವ ಅಗತ್ಯ ಪ್ರಮಾಣದ ನೀರನ್ನು ತೂಬುಗಳ ಮೂಲಕ ಒದಗಿಸಲಾಗುತ್ತದೆ. ಅದರ ಜೊತೆಯಲ್ಲಿ ಮಳೆ ನೀರನ್ನು ಸೇರಿಸಿಕೊಂಡು ಕೆರೆ ತುಂಬಿಸುವ ಯೋಜನೆ ರೂಪಿಸಲಾಗಿದೆ.
ತಿಪಟೂರು ತಾಲೂಕಿಗೆ ನೀರಾವರಿ ಯೋಜನೆ ಕಲ್ಪಿಸಬೇಕೆಂಬ ನಿರಂತರ ಹೋರಾಟಕ್ಕೆ ನಮಗೆ ಜಯ ಸಿಕ್ಕಂತಾಗಿದೆ. ಆದರೆ ಹೇಮಾವತಿ ಜಲಾಶಯದಿಂದ ಎಷ್ಟು ನೀರನ್ನು ನಿಗದಿಪಡಿಸಲಾಗಿದೆ ಎಂಬುದನ್ನು ಬಹಿರಂಗಪಡಿಸುತ್ತಿಲ್ಲ. ಇದರಿಂದ ಸಾಕಷ್ಟು ಅನುಮಾನಗಳು ಮೂಡುತ್ತಿವೆ ಎಂಬುದು ಹೋರಾಟಗಾರರ ಅಭಿಪ್ರಾಯವಾಗಿದೆ.
ಒಟ್ಟಾರೆ ದಶಕಗಳಿಂದ ನಿರಂತರವಾಗಿ ತಿಪಟೂರು ತಾಲೂಕಿನ ಬರಪೀಡಿತ ಪ್ರದೇಶಗಳಿಗೆ ಅಗತ್ಯವಿದ್ದ ನೀರಾವರಿ ಯೋಜನೆಗಳಿಗೆ ಕೊನೆಗೂ ಸಂಪುಟ ಅಸ್ತು ಎಂದಿದ್ದು, ಇಲ್ಲಿನ ಜನತೆಯಲ್ಲಿ ಸಂತಸ ಮೂಡಿಸಿದೆ.
ಇದನ್ನೂ ಓದಿ: ತುಮಕೂರು: ವಿದ್ಯುತ್ ತಂತಿ ತಗುಲಿ 7 ಕುರಿಗಳು ದಾರುಣ ಸಾವು