ತುಮಕೂರು: ಆಸ್ಪತ್ರೆಯೊಂದರಲ್ಲಿ ವೈದ್ಯರಿಲ್ಲದೇ ಬಾಲಕ ಸಾವಿಗೀಡಾಗಿದ್ದು, ಶವವನ್ನು ಕುಟುಂಬಸ್ಥರು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮುಂದಿಟ್ಟು ನ್ಯಾಯ ಕೊಡಿಸುವಂತೆ ಮನವಿ ಮಾಡಿಕೊಂಡ ಘಟನೆ ತುಮಕೂರು ಜಿಲ್ಲೆ ಮಧುಗಿರಿಯಲ್ಲಿ ನಡೆದಿದೆ.
ಮಧುಗಿರಿ ತಾಲೂಕಿನ ಕೊಡಿಗೆನಹಳ್ಳಿಯಲ್ಲಿ ಈ ಪ್ರಕರಣ ನಡೆದಿದ್ದು, ಕೊಡಿಗೆನಹಳ್ಳಿ ನಿವಾಸಿ ಚೌಕತ್ ಎಂಬುವರ ಪುತ್ರ ಸಾದೀಕ್ ಸಾವಿಗೀಡಾದ ಬಾಲಕನಾಗಿದ್ದಾನೆ. ಬೆಳಗ್ಗೆ ಶಾಲೆಗೆ ಹೋಗಿದ್ದ ಈತ ಮನೆಗೆ ಬಂದಾಗ ನೀರಿನ ಸಂಪ್ಗೆ ಬಿದ್ದು ಅಸ್ವಸ್ಥನಾಗಿದ್ದ. ಕೂಡಲೇ ಈತನನ್ನು ಕೊಡಿಗೆನಹಳ್ಳಿ ಸರ್ಕಾರಿ ಆಸ್ಪತ್ರೆಗೆ ಕುಟುಂಬಸ್ಥರು ಕರೆತಂದಿದ್ದರು.
ಆದರೆ, ಆಸ್ಪತ್ರೆಯಲ್ಲಿ ಆ ಸಮಯದಲ್ಲಿ ವೈದ್ಯರಿಲ್ಲದೇ ಚಿಕಿತ್ಸೆ ಸಿಗದಿದ್ದರಿಂದ ಬಾಲಕ ಮೃತಪಟ್ಟಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಅಲ್ಲದೆ, ಮಧುಗಿರಿ ತಾಲೂಕಿನಲ್ಲಿ ಪಂಚರತ್ನ ಯಾತ್ರೆಯಲ್ಲಿದ್ದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರ ಬಳಿಕ ಬಾಲಕನ ಶವ ತಂದಿರಿಸಿ, ನ್ಯಾಯ ಕೊಡಿಸುವಂತೆ ಮನವಿ ಮಾಡಿಕೊಂಡರು.
ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಕುಮಾರಸ್ವಾಮಿ, ಸ್ಥಳದಲ್ಲೇ ಆರೋಗ್ಯ ಇಲಾಖೆ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್‌ಗೆ ಕರೆ ಮಾಡಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಡಿಹೆಚ್‌ಒ ವಿರುದ್ಧ ಕ್ರಮಕೈಗೊಳ್ಳುವಂತೆ ಹೇಳಿದರು. ವೈದ್ಯರ ವಿರುದ್ಧ ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವಂತೆ ಕುಟುಂಬಸ್ಥರಿಗೆ ಸೂಚನೆ ನೀಡಿದರು.