ತುಮಕೂರು: ಇತ್ತೀಚಿನ ದಿನಗಳಲ್ಲಿ ಶಾಲಾ-ಕಾಲೇಜಿನಗಳಲ್ಲಿ ಗಾಂಧೀಜಿ ಅಂದರೆ ಬೇರೆ ಯಾರನ್ನೋ ಗುರುತಿಸುವುದು, ಗಾಂಧೀಜಿ ಅಂದರೆ ಯಾರು ಎಂದು ಪ್ರಶ್ನಿಸುವವರ ಸಂಖ್ಯೆಯೂ ಹೆಚ್ಚಾಗಿದೆ. ಕೆಲವರು ಗಾಂಧೀಜಿ ಅಂದರೆ ನಗುತ್ತಾರೆ. ಇದನ್ನೆಲ್ಲಾ ನೋಡಿದರೆ ನಾವು ಭಾರತೀಯರು ಎಂದು ಹೇಳಿಕೊಳ್ಳಲು ನಾಚಿಕೆಯಾಗಬೇಕು ಎಂದು ಹಿರಿಯ ಸಾಹಿತಿ ಎಂ ವಿ ನಾಗರಾಜರಾವ್ ಕಳವಳ ವ್ಯಕ್ತಪಡಿಸಿದರು.
ತುಮಕೂರು ಜಿಲ್ಲಾ ಸರ್ವೋದಯ ಮಂಡಲ, ಮಹಾತ್ಮಗಾಂಧಿ ಯುವ ಸಂಘ ಮತ್ತು ಬಾಪೂಜಿ ವಿದ್ಯಾಸಂಸ್ಥೆ ಆಶ್ರಯದಲ್ಲಿ 'ಬಾ, ಬಾಪೂ 150 ಮತ್ತು ಸರ್ವೋದಯ ಪರಿಚಯ ದರ್ಶಿನಿ' ಎಂಬ ಪುಸ್ತಕ ಬಿಡುಗಡೆ ಸಮಾರಂಭದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗಾಂಧೀಜಿ ಅಂದರೆ ಯಾರು ಎಂದು ಪ್ರಶ್ನಿಸುವವರ ಸಂಖ್ಯೆ ನೂರಕ್ಕೆ 70ರಿಂದ 80ರಷ್ಟಿದೆ. ಕೆಲವರು ಗಾಂಧೀಜಿ ಅಂದರೆ ನಗುತ್ತಾರೆ. ಇದನ್ನೆಲ್ಲಾ ನೋಡಿದರೆ ನಾಚಿಕೆಯಾಗಬೇಕು ಎಂದರು.
ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಟಿ.ಆರ್ ರೇವಣ್ಣ, ಗಾಂಧೀಜಿಯವರ ವಿಚಾರಧಾರೆಗಳನ್ನು ಮುಖ್ಯವಾಗಿ ವಿದ್ಯಾರ್ಥಿಗಳು ಅರಿತುಕೊಳ್ಳಬೇಕಿದೆ. ಗಾಂಧೀಜಿಯವರ ಹೆಸರನ್ನು ಹೇಳಿ ರಾಜಕೀಯ ಪಕ್ಷಗಳು ಗಾಂಧೀಜಿ ತತ್ವ ಸಿದ್ಧಾಂತಗಳನ್ನು ಮರೆಸುವಂತಹ ಕಾರ್ಯ ಮಾಡುತ್ತಿವೆ. ಹಾಗಾಗಿ ಯುವಕರು ಗಾಂಧೀಜಿಯವರ ಸಾಹಿತ್ಯವನ್ನು ಅಭ್ಯಸಿಸುವ ಮೂಲಕ ಗಾಂಧೀಜಿಯ ವಿಚಾರಧಾರೆಗಳನ್ನು ಅರಿತು ಗಾಂಧೀಜಿ ಕಂಡ ಸರ್ವೋದಯದ ತತ್ವಗಳನ್ನು ಅರ್ಥಮಾಡಿಕೊಳ್ಳಬೇಕಿದೆ ಎಂದರು.