ತುಮಕೂರು:ಸಿಎಂ ಯಡಿಯೂರಪ್ಪ ಹೇಳುವಂತೆ 15 ಸ್ಥಾನಗಳನ್ನು ಗೆಲ್ಲುವುದು ಕಷ್ಟ. ಪ್ರಜಾಪ್ರಭುತ್ವದಲ್ಲಿ ನೂರಕ್ಕೆ ನೂರು ಬರಲು ಸಾಧ್ಯವಿಲ್ಲ. 13 ಸ್ಥಾನ ಖಚಿತವಾಗಿ ಬಿಜೆಪಿ ಗೆಲ್ಲುತ್ತದೆ. ಆ ಮೂಲಕ ಸರ್ಕಾರ ಇನ್ನೂ ಮೂರು ವರ್ಷಗಳ ಕಾಲ ಸುಭದ್ರವಾಗಿರುತ್ತದೆ ಎಂದು ಸಂಸದ ಜಿ ಎಸ್ ಬಸವರಾಜು ಅಭಿಪ್ರಾಯಪಟ್ಟರು.
ನಗರದ ಕನ್ನಡ ಭವನದಲ್ಲಿ ಸಂಸದ ಜಿ ಎಸ್ ಬಸವರಾಜು ಅವರಿಗೆ ಜಿಲ್ಲಾ ಅಭಿಮಾನಿ ಬಳಗದಿಂದ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ನಾನೇ ನಿಮಗೆ ಸನ್ಮಾನ ಮಾಡಬೇಕು. ರಾಕ್ಷಸರ ವಿರುದ್ಧ ನಿಲ್ಲಿಸಿ, ಗೆಲ್ಲಿಸಿದ್ದೀರಿ, ನಾನು ನಿಮ್ಮ ಋಣ ತೀರಿಸಬೇಕಿದೆ ಎಂದರು.
ಕಾಂಗ್ರೆಸ್ ಮೂರು ಗುಂಪಾಗಿದೆ. ಅದಕ್ಕೆ ಗೆಲುವು ಸಾಧ್ಯವಿಲ್ಲ. ಜೆಡಿಎಸ್ 3ರಿಂದ 4 ಕ್ಷೇತ್ರದಲ್ಲಿ ಪೈಪೋಟಿ ನೀಡಲಿದೆ. ನಮ್ಮ ಪಕ್ಷದಲ್ಲಿ ಒಗ್ಗಟ್ಟಿನ ಮಂತ್ರವಿದೆ ಎಂದು ಹೇಳಿದರು. ಚಿಕ್ಕತೊಟ್ಲು ಕೆರೆಯ ಅಟವಿ ಜಂಗಮ ಕ್ಷೇತ್ರದ ಪೀಠಾಧ್ಯಕ್ಷ ಅಟವಿ ಶಿವಲಿಂಗ ಸ್ವಾಮೀಜಿ ಪಾಲ್ಗೊಂಡಿದ್ದರು.