ತುಮಕೂರು: ಕೊಲೆಗಡುಕ ಶಾಸಕ ಮಸಾಲೆ ಜಯರಾಂ ಎಂದು ಹಾಕಲಾಗಿದ್ದ, ಬ್ಯಾನರ್ನ್ನು ತುರುವೇಕೆರೆ ಪಟ್ಟಣದ ಪಟ್ಟಣ ಪಂಚಾಯತ್ ವತಿಯಿಂದ ತೆರವುಗೊಳಿಸಿದ್ದನ್ನು ವಿರೋಧಿಸಿ ಮಾಜಿ ಶಾಸಕ ಎಂ.ಟಿ. ಕೃಷ್ಣಪ್ಪ ನೇತೃತ್ವದಲ್ಲಿ ದಿಢೀರ್ ಧರಣಿ ನಡೆಸಲಾಯಿತು. ಇನ್ನೊಂದೆಡೆ ಸ್ಥಳಕ್ಕಾಗಮಿಸಿದ ಶಾಸಕ ಮಸಾಲೆ ಜಯರಾಂ ಬೆಂಬಲಿಗರು ಮಾಜಿ ಶಾಸಕ ಎಂ.ಟಿ. ಕೃಷ್ಣಪ್ಪ ವಿರುದ್ಧ ಘೋಷಣೆ ಕೂಗಿದರು.
ಒಂದು ಹಂತದಲ್ಲಿ ಶಾಸಕ ಮಸಾಲೆ ಜಯರಾಂ ಮತ್ತು ಮಾಜಿ ಶಾಸಕ ಎಂ. ಟಿ. ಕೃಷ್ಣಪ್ಪ ನಡುವೆ ಜಗಳ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಎರಡೂ ಕಡೆಯವರ ನಡುವೆ ತಳ್ಳಾಟ ನೂಕಾಟ ನಡೆಯಿತು. ಸ್ಥಳದಲ್ಲಿದ್ದ ಪೊಲೀಸರು ಎರಡು ಗುಂಪುಗಳನ್ನು ತಡೆದು ಸಮಾಧಾನ ಪಡಿಸಲು ಹರಸಾಹಸಪಟ್ಟರು. ಎರಡೂ ಕಡೆಯಿಂದಲೂ ಧಿಕ್ಕಾರದ ಘೋಷಣೆಗಳನ್ನು ಕೂಗಲಾಯಿತು.
ಮಾಜಿ ಶಾಸಕ ಎಂ.ಟಿ. ಕೃಷ್ಣಪ್ಪ ನೇತೃತ್ವದಲ್ಲಿ ಆಗಸ್ಟ್ 30ರಂದು ಶಾಸಕ ಮಸಾಲೆ ಜಯರಾಂ ವಿರುದ್ಧ ತುರುವೇಕೆರೆಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ಸಂಬಂಧ ತುರುವೇಕೆರೆಯಲ್ಲಿ ಜೆಡಿಎಸ್ ವತಿಯಿಂದ ಕಟೌಟ್ನನ್ನು ಹಾಕಲಾಗಿತ್ತು. ಅದರಲ್ಲಿ ‘ದೌರ್ಜನ್ಯದ ಮೂಲಕ ತೆಂಗಿನ ಸಸಿಗಳನ್ನು ಕೀಳಿಸಿ, ಹೆಣ್ಣು ಮಕ್ಕಳ ಮೇಲೆ ಲಾಠಿ ಚಾರ್ಜ್ ಮಾಡಿಸಿದಂತಹ ಕೊಲೆಗಡುಕ ಶಾಸಕ ಮಸಾಲೆ ಜಯರಾಂ ಅವರ ವಿರುದ್ಧ ಹಾಗೂ ಈ ಕ್ಷೇತ್ರದ ರೈತರ ಉಳುವಿಗಾಗಿ” ಎಂಬುದಾಗಿ ಬರೆದು ಬ್ಯಾನರ್ನನ್ನು ತುರುವೇಕೆರೆ ಪಟ್ಟಣದಲ್ಲಿ ಹಾಕಲಾಗಿತ್ತು. ಇದನ್ನು ಸಂಜೆ ಮಸಾಲೆ ಜಯರಾಂ ತೆರವುಗೊಳಿಸಿದ್ದರು.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಮಾಜಿ ಶಾಸಕ ಎಂ.ಟಿ. ಕೃಷ್ಣಪ್ಪ ಮತ್ತು ಶಾಸಕ ಮಸಾಲೆ ಜಯರಾಂ ನಡುವೆ ವಾಗ್ವಾದ ನಡೆಯಿತು. ನಂತರ ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ತಂದರು.