ತುಮಕೂರು: ಕ್ಷುಲ್ಲಕ ಕಾರಣಕ್ಕೆ ಮಹಿಳೆಯ ಕೊಲೆಗೆ ಯತ್ನಿಸಿದ ಸಲೀಂ ಬೇಗ್ ಎಂಬ ಆರೋಪಿಗೆ ತುಮಕೂರು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ 5 ವರ್ಷ ಕಠಿಣ ಶಿಕ್ಷೆ ಹಾಗೂ 25 ಸಾವಿರ ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.
2018ರ ಮೇ 23ರಂದು ತುಮಕೂರು ನಗರದ ಉಪ್ಪಾರಹಳ್ಳಿ ಆಟೋ ನಿಲ್ದಾಣದಲ್ಲಿ ಮಹಿಳೆಯ ಕೊಲೆ ಯತ್ನ ಪ್ರಕರಣ ನಡೆದಿತ್ತು. ಉಪ್ಪಾರಳ್ಳಿ ನಿವಾಸಿ ಮಹಮ್ಮದ್ ಅವರ ಪತ್ನಿ ಆಸಿಯಾ ದಾರಿಯಲ್ಲಿ ಹೋಗುತ್ತಿದ್ದಾಗ ಸಲೀಂ ಬೇಗ್ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದನು. ಈ ಘಟನೆಯಲ್ಲಿ ಆಸಿಯಾ ಗಂಭೀರವಾಗಿ ಗಾಯಗೊಂಡಿದ್ದರು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಆರೋಪಿ ಸಲಿಂ ಬೇಗ್‌ನನ್ನು ಬಂಧಿಸಿ, ತನಿಖೆ ನಡೆಸಿದ್ದು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ರಾಜೇಂದ್ರ ಬಾದಾಮಿಕರ್ ಆರೋಪಿಗೆ 5 ವರ್ಷ ಕಠಿಣ ಶಿಕ್ಷೆ ವಿಧಿಸಿ ತೀರ್ಪಿತ್ತಿದ್ದಾರೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಕೆ.ಹೆಚ್ ಶ್ರೀಮತಿ ಪ್ರಕರಣದ ಬಗ್ಗೆ ವಾದ ಮಂಡಿಸಿದ್ದರು.