ತುಮಕೂರು : ಆಶಾ ಕಾರ್ಯಕರ್ತೆಯರಿಗೆ 12,000 ರೂ. ಮಾಸಿಕ ಗೌರವಧನ ಖಾತರಿ ಪಡಿಸಿ, ಅಗತ್ಯವಿರುವ ಆರೋಗ್ಯ ಸಾಮಗ್ರಿಗಳನ್ನು ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಆಶಾ ಕಾರ್ಯಕರ್ತೆಯರಿಗೆ ಮಾಸಿಕ 12,000 ರೂ. ಗೌರವಧನ ಖಾತರಿಪಡಿಸಬೇಕು. ಕೋವಿಡ್-19 ವಿರುದ್ಧ ಹೋರಾಟಕ್ಕೆ ಅಗತ್ಯವಿರುವಷ್ಟು ರಕ್ಷಣಾ ಸಾಮಗ್ರಿಗಳನ್ನು ನೀಡಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೊರೊನಾ ವಾರಿಯರ್ಸ್ ಪ್ಯಾಕೇಜ್ ಹಣ ₹2,000 ಹಾಗೂ ₹3,000 ಪ್ರೋತ್ಸಾಹ ಧನವನ್ನು ತಕ್ಷಣವೇ ಆಶಾ ಕಾರ್ಯಕರ್ತೆಯರಿಗೆ ತಲುಪಿಸಬೇಕು ಎಂಬ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಕಳೆದ ಹತ್ತು ವರ್ಷಗಳಿಂದ ಆಶಾ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಶಾ ಕಾರ್ಯಕರ್ತೆಯರಿಗೆ ನೀಡುತ್ತಿದ್ದ ಗೌರವಧನ ನಿಗದಿತ ಸಮಯಕ್ಕೆ ತಲುಪುತ್ತಿಲ್ಲ. ಕೊರೊನಾ ಆರಂಭವಾದಾಗಿನಿಂದ್ಲೂ ನಮ್ಮ ಜೀವವನ್ನು ಲೆಕ್ಕಿಸದೇ, ಬೇರೆಯವರ ಜೀವವನ್ನು ಉಳಿಸಲು ಹೋರಾಟ ನಡೆಸುತ್ತಿದ್ದೇವೆ. ಕೊರೊನಾ ವೇಳೆಯಲ್ಲಿ ಕಾರ್ಯನಿರ್ವಹಿಸಿದ ನಮಗೆ ಪ್ರೋತ್ಸಾಹಧನ ನೀಡುತ್ತೇವೆ ಎಂದು ಹೇಳಿದ್ದರು, ಅದು ಸಹ ನೀಡಿಲ್ಲ. ಈಗಲಾದ್ರೂ ಕೋವಿಡ್-19 ವಿರುದ್ಧ ಹೋರಾಡಲು ನಮಗೆ ಅಗತ್ಯವಿರುವಂತಹ ಸಾಮಗ್ರಿಗಳನ್ನು ನೀಡಿ ಎಂದು ಶಾರದಮ್ಮ ಸರ್ಕಾರಕ್ಕೆ ಮನವಿ ಮಾಡಿದರು.