ತುಮಕೂರು: ಶಿರಾ ಉಪಚುನಾವಣೆಗೆ ಸಂಬಂಧಿಸಿದಂತೆ ಹಣ ಹಂಚುತ್ತಿರುವ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಗೋಮಾರದಹಳ್ಳಿಯಲ್ಲಿ ಮೂವರು ಮಹಿಳೆಯರು ರಸ್ತೆಯಲ್ಲಿಯೇ ಹಣವನ್ನು ಹಂಚಿಕೊಳ್ಳುತ್ತಿರುವ ದೃಶ್ಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಹಾಸನ ಶಾಸಕ ಪ್ರೀತಂ ಗೌಡ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್ ಆಗ್ರಹ:
ಶಿರಾ ವಿಧಾನಸಭೆ ಕ್ಷೇತ್ರದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿ ಚುನಾವಣೆ ಅಕ್ರಮದಲ್ಲಿ ಬಿಜೆಪಿ ಮುಖಂಡರು ಹಾಗೂ ಹಾಸನ ಶಾಸಕ ಪ್ರೀತಂ ಗೌಡ ನೇರವಾಗಿ ಭಾಗಿಯಾಗಿದ್ದು, ಕೂಡಲೇ ಅವರ ಗೂಂಡಾ ಪಡೆಯನ್ನು ಉಪಚುನಾವಣೆ ನಡೆಯುತ್ತಿರುವ ಶಿರಾ ಕ್ಷೇತ್ರದಿಂದ ಹೊರಹಾಕಿ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರತಿನಿಧಿ ರಘು ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ.
ನಿನ್ನೆಯಿಂದ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಪರವಾಗಿ ಕ್ಷೇತ್ರದಲ್ಲಿ ಅನೇಕ ಬಿಜೆಪಿ ಮುಖಂಡರು ಎನ್ನಲಾದ ಕೆಲವರು ಹಣ, ಸೀರೆ, ಮಾಂಸ ವಿತರಿಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅದರಲ್ಲಿಯೂ ಹಾಸನ ಶಾಸಕ ಪ್ರೀತಂ ಗೌಡ, ಹಾಸನ, ಬೆಂಗಳೂರು, ಮಂಗಳೂರು ಸೇರಿಂತೆ ವಿವಿಧೆಡೆಯಿಂದ ಗೂಂಡಾಗಳನ್ನು ಕರೆಸಿಕೊಂಡು ಗೂಂಡಾ ವರ್ತನೆ ತೋರುತ್ತಿದ್ದಾರೆ. ಚುನಾವಣಾ ಅಕ್ರಮದಲ್ಲಿ ತೊಡಗಿದ್ದಾರೆ. ಚುನಾವಣಾ ನೀತಿ ಸಂಹಿತೆಯನ್ನು ನೇರವಾಗಿ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.