ತುಮಕೂರು: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಸರ್ಕಾರದಿಂದ ವಿದ್ಯಾರ್ಥಿಗಳಿಗೆ ನೀಡುವ ಲ್ಯಾಪ್ ಟಾಪ್ ವಿತರಣೆಯಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ವೇಳೆ ತೃತೀಯ ವರ್ಷ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿನಿ ಸೌಂದರ್ಯ ಮಾತನಾಡಿ, ನಾವು ಪ್ರಥಮ ವರ್ಷದ ವಿದ್ಯಾಭ್ಯಾಸ ನಡೆಸುತ್ತಿರುವಾಗ ಮಂಜೂರಾದ ಲ್ಯಾಪ್ ಟಾಪ್ ನಮಗೆ ನೀಡುವ ಬದಲು, ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ನೀಡಲಾಗಿದೆ. ಲ್ಯಾಪ್ ಟಾಪ್ ನೀಡಿರುವುದು ಸಂತಸದ ವಿಚಾರ. ಆದರೆ, ನಾವು ಅಂತಿಮ ವರ್ಷದ ವಿದ್ಯಾರ್ಥಿಗಳು. ಪ್ರಥಮ ವರ್ಷದ ವಿದ್ಯಾರ್ಥಿಗಳಿಗಿಂತ ನಮಗೆ ಲ್ಯಾಪ್ ಟಾಪ್ ನ ಅವಶ್ಯಕತೆ ಹೆಚ್ಚಾಗಿರುತ್ತದೆ. ನಮಗೆ ಮಂಜೂರಾಗಿರುವ ಲ್ಯಾಪ್ ಟಾಪನ್ನು ಬೇರೆಯವರಿಗೆ ನೀಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನೂ ಈ ಬಗ್ಗೆ ನಾನು ಪ್ರಾಂಶುಪಾಲರ ಹತ್ತಿರ ಮಾತನಾಡಿದಾಗ ನಿಮಗೆ ಲ್ಯಾಪ್ ಟಾಪ್ ಮಂಜೂರಾಗಿಲ್ಲ ಎನ್ನುತ್ತಾರೆ. ನಾವು ಅದೇ ಕಾಲೇಜಿನ ವಿದ್ಯಾರ್ಥಿಗಳು ಒಬ್ಬರಿಗೆ ಲ್ಯಾಪ್ ಟಾಪ್ ನೀಡುವುದು, ಮತ್ತೊಬ್ಬರಿಗೆ ನೀಡದಿರುವುದು ಮಾಡುವ ಮೂಲಕ ವಿದ್ಯಾರ್ಥಿಗಳ ನಡುವೆ ತಾರತಮ್ಯ ಉಂಟಾಗುವಂತೆ ಪ್ರಾಂಶುಪಾಲರು ನಡೆದುಕೊಳ್ಳಬಾರದು. ಮುಂದಿನ ದಿನಗಳಲ್ಲಿ ನಮಗೆ ಲ್ಯಾಪ್ ಟಾಪ್ ವಿತರಣೆ ಮಾಡದಿದ್ದರೆ, ರಾಜ್ಯದಾದ್ಯಂತ ಎಲ್ಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ರಸ್ತೆಗಿಳಿದು ಪ್ರತಿಭಟನೆ ಮಾಡಲಿದ್ದಾರೆ ಎಂದು ವಿದ್ಯಾರ್ಥಿ ಅಣ್ಣಯ್ಯ ಎಚ್ಚರಿಕೆ ನೀಡಿದರು.