ತುಮಕೂರು: ಮನೆ ಇಲ್ಲದೆ ಗುಡಿಸಿಲಲ್ಲಿ ವಾಸ ಮಾಡುತ್ತಿದ್ದು, ಮನೆ ಕಟ್ಟಿಕೊಳ್ಳಲು ಸಹಾಯ ಮಾಡಿ ಎಂದು ಬಾಲಕಿಯೊಬ್ಬಳು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ತಕ್ಷಣ ಸ್ಪಂದಿಸಿರುವ ರಾಷ್ಟ್ರಪತಿ ಭವನದ ಕಚೇರಿ ಅಧಿಕಾರಿಗಳು ತುಮಕೂರು ಜಿಲ್ಲಾ ಅಧಿಕಾರಿಗೆ ಸೂಚನೆ ನೀಡಿದ್ದಾರೆ. ತುಮಕೂರು ಜಿಲ್ಲೆ, ತುರುವೇಕೆರೆ ತಾಲೂಕಿನ ತೂಯಲಹಳ್ಳಿ ಗ್ರಾಮದ ಲಕ್ಷ್ಮೀ ಎಂಬ ವಿದ್ಯಾರ್ಥಿನಿ ನೀಡಿರುವ ಮನವಿಯನ್ನು ಪರಿಶೀಲಿಸುವಂತೆ ರಾಷ್ಟ್ರಪತಿ ಅಧೀನ ಕಾರ್ಯದರ್ಶಿಗಳು ಪತ್ರ ಬರೆದಿದ್ದಾರೆ.
ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಆದೇಶದನ್ವಯ ಶಾಲಾ ಬಾಲಕಿ ಮನೆಗೆ ಭೇಟಿ ನೀಡಿ ತುರುವೇಕೆರೆ ತಹಶೀಲ್ದಾರ್ ಪರಿಶೀಲನೆ ನಡೆಸಿದರು. ಕಳೆದ ಜೂನ್ 29 ರಂದು ಮನೆ ಕಟ್ಟಲು ನಿವೇಶನ ನೀಡುವಂತೆ ರಾಷ್ಟ್ರಪತಿಗೆ ಶಾಲಾ ಬಾಲಕಿ ಲಕ್ಷ್ಮೀ ಪತ್ರ ಬರೆದು ಮನವಿ ಮಾಡಿದ್ದಳು. ತುರುವೇಕೆರೆ ತಾಲೂಕಿನ ತೂಯಲಹಳ್ಳಿ ಗ್ರಾಮದ ನಿವಾಸಿ ಆಗಿರುವ ಬಾಲಕಿ ಲಕ್ಷ್ಮೀ ತೂಯಲಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದಾಳೆ. ಬಾಲಕಿ ಮನೆಗೆ ಭೇಟಿ ನೀಡಿದ್ದ ತಹಶೀಲ್ದಾರ್, ಹಾಗೂ ಪಿಡಿಓ ಸ್ಥಳ ಪರಿಶೀಲನೆ ನಡೆಸಿ ಮನೆ ಕಟ್ಟಲು ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಬಾಲಕಿ ತಂದೆ ಕಟ್ಟುತ್ತಿರುವ ಮನೆ ಇರುವ ಜಮೀನು ತಕರಾರು ಹಿನ್ನೆಲೆ, ಹಿರಿಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಗ್ರಾಮದ ಸರ್ಕಾರಿ ಗೋಮಾಳ ಜಾಗದಲ್ಲಿ ಮನೆ ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದ್ದಾರೆ.
ಶಾಲಾ ಬಾಲಕಿ ರಾಷ್ಟ್ರಪತಿಗೆ ಬರೆದ ಪತ್ರದಲ್ಲಿ, "ತೂಯಲಹಳ್ಳಿ ಗ್ರಾಮದ GHPS ನಲ್ಲಿ 7 ನೇ ತರಗತಿ ಓದುತ್ತಿರುವ ನಾನು, ನನ್ನ ತಂದೆ, ತಾಯಿ, 11 ವರ್ಷ, 9 ವರ್ಷ ಮತ್ತು 6 ವರ್ಷಗಳ ಕಿರಿಯ ಸಹೋದರಿಯರು ಕಳೆದ 25 ವರ್ಷಗಳಿಂದ ಗುಡಿಸಲಿನಲ್ಲಿ ವಾಸಿಸುತ್ತಿದ್ದು, ನಮ್ಮ ಅಜ್ಜ (ತಾಯಿಯ ತಂದೆ) ಅಲ್ಲಿಯೇ ವಾಸವಾಗಿದ್ದರು. ಸರ್ವೆ ನಂ. 19 ತೂಯಲಹಳ್ಳಿ ಗ್ರಾಮ ಮಾಯಸಂದ್ರ ಹೋಬಳಿ, ತುರುವೇಕೆರೆ ತಾಲೂಕು, ತುಮಕೂರು ಜಿಲ್ಲೆ. ನಮ್ಮ ಪಂಚಾಯತಿಯಿಂದ ಮನೆ ಕಟ್ಟಲು 10,000 ರೂ. ಮಂಜೂರಾಗಿದೆ. ನಾವು ಸಣ್ಣ ಗುಡಿಸಲಿನಲ್ಲಿ ವಾಸಿಸುತ್ತಿದ್ದೇವೆ. ಮಳೆ ಪ್ರಾರಂಭವಾದರೆ ವಾಸಿಸಲು ಆಶ್ರಯವಿಲ್ಲ ನಾವು ಆರ್ಥಿಕವಾಗಿ ಬಡವರಾಗಿದ್ದೇವೆ. ಮತ್ತು ಕೂಲಿ ಮಾಡುವ ಮೂಲಕ ಜೀವನ ಸಾಗಿಸುತ್ತಿದ್ದೇವೆ. ಈಗ ನನ್ನ ಅಜ್ಜನ ಅಣ್ಣ ಮರಿಬಸವಯ್ಯ ಎಂಬುವರು ಜಮೀನು ತನಗೆ ಸೇರಿದ್ದು ಎಂದು ಆಕ್ಷೇಪಿಸಿ ನ್ಯಾಯಾಲಯದ ನೋಟಿಸ್ ಜಾರಿ ಮಾಡಿದ್ದಾರೆ. ಮನೆ ಕಟ್ಟಲು ತಕರಾರು ಮಾಡುತ್ತಿದ್ದಾರೆ. ಅವರು ನಮ್ಮ ಗ್ರಾಮದಿಂದ ಸುಮಾರು ಕಿ.ಮೀ ದೂರದಲ್ಲಿರುವ ದೇವಲಾಪುರ ಎಂಬ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ದಯವಿಟ್ಟು ನಮಗೆ ಮನೆ ಕಟ್ಟಲು ಅನುಕೂಲ ಮಾಡಿಕೊಡಿ ಎಂದು ಪ್ರಾರ್ಥಿಸುತ್ತೇನೆ." ಎಂದು ಬರೆದಿದ್ದಳು.
ಇದನ್ನೂ ಓದಿ: ನನಗೆ ಮನೆ ಕೊಡಿ, ಇಲ್ಲವೇ ಸಾಯಲು ಅನುಮತಿ ನೀಡಿ; ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆದ ಸಂತ್ರಸ್ತೆ