ತುಮಕೂರು: ನಿಂತಿದ್ದ ಕ್ರೂಸರ್ ಕಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತುಮಕೂರಿನ ಕೋರಾ ಬಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನಡೆದಿದೆ.
ಕ್ರೂಸರ್ ಚಾಲಕ ಶಂಕರ್ (35), ಖಾಸಗಿ ಪಡಿತರ ವಿತರಣಾ ಕೇಂದ್ರದ ಮಾಲೀಕ ಸತೀಶ್ (40) ಮೃತ ದುರ್ದೈವಿಗಳಾಗಿದ್ದಾರೆ. ಅಪಘಾತದಲ್ಲಿ ಇನ್ನೋರ್ವನಿಗೆ ಸಣ್ಣಪುಟ್ಟ ಗಾಯ ಆಗಿದ್ದು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೃತರು ಗಂಗಾವತಿ ಮೂಲದವರು ಅನ್ನುವ ಮಾಹಿತಿ ಲಭ್ಯವಾಗಿದೆ. ಗಂಗಾವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾಗಲು ತೆರಳುತ್ತಿದ್ದರು. ಖಾಸಗಿ ಪಡಿತರ ವಿತರಣಾ ಕೇಂದ್ರದ ಮಾಲೀಕರಿಗೆ, ಕಮಿಷನ್ ಹಣ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ನಡೆಯಲಿರುವ ಪ್ರತಿಭಟನೆ ಇದಾಗಿದೆ.
ಈ ಪ್ರತಿಭಟನೆಗೆ ತೆರಳುವ ವೇಳೆ ಕೋರಾ ಸಮೀಪ ಕ್ರೂಸರ್ ಕಾರಿನ ಹಿಂಬದಿಯ ಟೈರ್ ಪಂಕ್ಚರ್ ಆಗಿತ್ತು. ಹೀಗಾಗಿ ಹೆದ್ದಾರಿ ಬದಿಯಲ್ಲಿ ಕಾರ್ ನಿಲ್ಲಿಸಿ ಟೈರ್ ಬದಲಿಸುತ್ತಿದ್ದ ವೇಳೆ ಲಾರಿ ಬಂದು ಡಿಕ್ಕಿ ಹೊಡೆದಿದೆ. ಅಪಘಾತಕ್ಕೆ ಕಾರಣನಾದ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಮೃತದೇಹಗಳನ್ನು ತುಮಕೂರು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಈ ಸಂಬಂಧ ಕೋರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಪ್ರತ್ಯೇಕ ಪ್ರಕರಣ- ಜಾಗ್ವಾರ್ ಕಾರಿಗೆ ಬೆಂಕಿ: ತುಮಕೂರಲ್ಲೇ ಮತ್ತೊಂದು ಅವಘಡ ನಡೆದಿದೆ. ಕೋಟ್ಯಂತರ ರೂ. ಮೌಲ್ಯದ ಜಾಗ್ವಾರ್ ಕಾರಿಗೆ ಬೆಂಕಿ ತಗುಲಿರುವ ಘಟನೆ ಜಿಲ್ಲೆಯ ಕುಣಿಗಲ್ ಪಟ್ಟಣದಲ್ಲಿ ನಡೆದಿದೆ. ಮದುಮಗ ಇದೇ ಕಾರಿನಲ್ಲಿ ತನ್ನ ಮದುವೆಗೆ ಬಂದು ಇಳಿದು ಹೋಗಿದ್ದ. ಬಳಿಕ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ಕುಣಿಗಲ್ನ ನಕ್ಷತ್ರ ಪ್ಯಾಲೇಸ್ ಕಲ್ಯಾಣ ಮಂಟಪದಲ್ಲಿ ಮದುವೆ ಇದ್ದಿದ್ದು ಇಲ್ಲಿಗೆ ಕಾರಿನಲ್ಲಿ ಬರಲಾಗಿತ್ತು. ಶಾರ್ಟ್ ಸರ್ಕ್ಯೂಟ್ನಿಂದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮಾಹಿತಿ ಬಳಿಕ ಅಗ್ನಿ ಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸಿದ್ದು, ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಶಾಲಾ ಬಿಸಿಯೂಟದ ಅಡುಗೆ ಕೊಠಡಿಯಲ್ಲಿ ಕುಕ್ಕರ್ ಬ್ಲಾಸ್ಟ್.. ಒಬ್ಬ ಸಿಬ್ಬಂದಿಗೆ ಗಾಯ :- ವಿಡಿಯೋ ನೋಡಿ
ಬಳ್ಳಾರಿಯ ಶಾಲೆಯೊಂದರಲ್ಲಿ ಅಡುಗೆ ವೇಳೆ ಸಿಡಿದ ಕುಕ್ಕರ್: ಜಿಲ್ಲೆಯ ಸಿದ್ದಪ್ಪನವರ ಹಿರಿಯ ಪ್ರಾಥಮಿಕ ಶಾಲೆಯ ಬಿಸಿಯೂಟ ಅಡುಗೆ ಕೊಠಡಿಯಲ್ಲಿ ಮಹಿಳಾ ಸಿಬ್ಬಂದಿ ಎಂದಿನಂತೆ ಅಡುಗೆ ಕಾರ್ಯದಲ್ಲಿ ನಿರತರಾಗಿದ್ದರು. ಈ ವೇಳೆ ಒಲೆಯಲ್ಲಿಟ್ಟಿದ್ದ ಕುಕ್ಕರ್ ವಿಜಿಲ್ ಹೊಡೆಯದೇ ಸ್ಫೋಟಗೊಂಡಿರುವ ಘಟನೆ ಬುಧವಾರ ನಡೆದಿದೆ. ಸ್ಫೋಟಕ್ಕೆ ಓರ್ವ ಸಿಬ್ಬಂದಿ ಮೇಲೆ ಬಿಸಿ ನೀರು ಸಿಡಿದು ಗಾಯಗಳಾಗಿದೆ.