ತುಮಕೂರು: ಮಕ್ಕಳಿಲ್ಲದ ದಂಪತಿಗಳನ್ನೇ ಗುರಿಯಾಗಿಸಿಕೊಂಡ ನಕಲಿ ವೈದ್ಯರು ಲಕ್ಷಾಂತರ ರೂ.ಗಳನ್ನು ದೋಚಿರುವ ಘಟನೆ ಜಿಲ್ಲೆಯ ತಿಪಟೂರು ತಾಲೂಕಿನ ಬೆಳಗರಹಳ್ಳಿ ಗ್ರಾಮದಲ್ಲಿ ನಡೆದಿದೆ. ವಾಣಿ ಮತ್ತು ಮಂಜುನಾಥ್ ದಂಪತಿಗಳೇ ಆರೋಪಿಗಳಾಗಿದ್ದು, 2021ರ ಸೆ.28ರಂದು ಬೆಳಗರಹಳ್ಳಿಯ ದಂಪತಿಗಳಿಗೆ ಔಷಧ ನೀಡುವುದಾಗಿ ಹೇಳಿದ್ದರು. ಅದರಂತೆ 3ತಿಂಗಳ ಕಾಲ ಔಷಧ ಸೇವಿಸಿದರೆ, ನಿಮಗೆ ಖಂಡಿತ ಮಕ್ಕಳಾಗುತ್ತವೆ ಎಂದು ನಂಬಿಸಿದ್ದರು. ಇದಕ್ಕೆ 2.13ಲಕ್ಷ ರೂ.ಗಳನ್ನು ಪಡೆದಿದ್ದರು.
ವಂಚಕ ದಂಪತಿ ವಾಣಿ ಮತ್ತು ಮಂಜುನಾಥ್ ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದೇವೆ ಎಂದು ಹೇಳಿ ವಾಹನದ ಮೇಲೆ ವೈದ್ಯರ ಚಿಹ್ನೆಯನ್ನೂ ಸಹ ಹಾಕಿಕೊಂಡಿದ್ದರು. ತಿಪಟೂರಿನ ಶಂಕರಮಠ ಬಡಾವಣೆಯಲ್ಲಿ ಮನೆ ಮಾಡಿಕೊಂಡಿದ್ದ ನಕಲಿ ವೈದ್ಯ ದಂಪತಿ, ತಿಪಟೂರು ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಂಚಾರ ಮಾಡುತ್ತಾ, ಮಕ್ಕಳಿಲ್ಲದವರನ್ನು ಸಂಪರ್ಕಿಸಿ ಅವರಿಗೆ ಮಕ್ಕಳಾಗುವ ಪುಡಿ ಕೊಡುತ್ತೇವೆಂದು ಹೇಳಿ ಅವರಿಂದ ರಕ್ತ ಮತ್ತು ವೀರ್ಯದ ಮಾದರಿ ತೆಗೆದುಕೊಂಡು ಯಾವ್ಯಾವುದೋ ಚುಚ್ಚುಮದ್ದು ನೀಡುತ್ತಿದ್ದರೆಂದು ತಿಳಿದು ಬಂದಿದೆ.
ಇದನ್ನೂ ಓದಿ: ಪುಟಿನ್ ಸೇನಾ ದಾಳಿಗೆ 16 ಮಕ್ಕಳು ಬಲಿ, ರಷ್ಯಾದ 5,300 ಯೋಧರು ಸಾವು: ಉಕ್ರೇನ್ ರಾಯಭಾರಿ ಇಗೊರ್ ಪೊಲಿಖಾ
ನಿಮಗೆ ಮಕ್ಕಳಾಗುವಂತೆ ಮಾಡುತ್ತೇವೆ. ನೀವು ಯಾವುದೇ ಇತರೆ ಔಷಧಗಳನ್ನ ತೆಗೆದುಕೊಳ್ಳಬಾರದು. ನಾವು ಕೊಡುವ ಪುಡಿಗಳೊಂದಿಗೆ ಬೆಳಗಿನ ವೇಳೆ ಪಚ್ಚ ಬಾಳೆಹಣ್ಣು, ಬಾದಾಮಿ ಇತರ ಒಣ ಹಣ್ಣುಗಳನ್ನು ತಿನ್ನಬೇಕೆಂದು ದಂಪತಿಗಳಿಗೆ ಇವರು ತಿಳಿಸುತ್ತಿದ್ದರಂತೆ. ಇದನ್ನು ನಂಬಿದ ಮಹಿಳೆಯೊಬ್ಬರು ಇವರು ಕೊಟ್ಟ ಔಷಧ ಸೇವಿಸಿ ಪ್ರಸ್ತುತ ಬೆಂಗಳೂರಿನ ಸೇಂಟ್ ಜಾನ್ ಆಸ್ಪತ್ರೆಯಲ್ಲಿ ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದಾರೆ. ಈ ಸಂಬಂಧ ನೊಣವಿನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.