ತುಮಕೂರು : ಜಿಲ್ಲೆಯಲ್ಲಿ ಶಾಲೆಗಳು ಆರಂಭವಾದ ಆಗಸ್ಟ್ ತಿಂಗಳಿನಿಂದ ಈವರೆಗೂ ಖಾಸಗಿ ಹಾಗೂ ಸರ್ಕಾರಿ ಶಾಲೆಗಳಲ್ಲಿನ 7 ಮಕ್ಕಳಿಗೆ ಕೊರೊನಾ ಸೋಂಕು ತಗುಲಿದೆ. ಇದರ ಜತೆಗೆ ಓರ್ವ ಶಿಕ್ಷಕನಿಗೆ ಸೋಂಕು ತಗುಲಿದೆ. ಸರ್ಕಾರದ ಮಾರ್ಗಸೂಚಿಯಂತೆ ಸೋಂಕು ಪತ್ತೆಯಾಗಿರುವ ಶಾಲೆಗಳನ್ನು ಬಂದು ಮಾಡಿ ನಂತರ ಆರಂಭಿಸಲಾಗುತ್ತಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ನಂಜಯ್ಯ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
ಶಾಲೆಗಳು ಆರಂಭವಾದ ನಂತರದ ದಿನಗಳಲ್ಲಿ 3ನೇ ಸೋಂಕಿನ ಗುಣಲಕ್ಷಣಗಳನ್ನು ಹೊಂದಿರುವ ಕೊರೊನಾ ಸೋಂಕು ಪೀಡಿತ ಮಕ್ಕಳು ಪತ್ತೆಯಾಗಿದ್ದರು. ತಕ್ಷಣ ಅವರು ಹೋಮ್ ಕ್ವಾರಂಟೈನ್‌ಗೆ ಒಳಗಾಗಿದ್ದರು. ಅಲ್ಲದೇ ಸರ್ಕಾರದ ಮಾರ್ಗಸೂಚಿಯಂತೆ ಹತ್ತು ದಿನಗಳ ಕಾಲ ಶಾಲೆಗಳನ್ನು ಬಂದ್ ಮಾಡಲಾಗಿತ್ತು.
ಎಲ್ಲಾ ಮಕ್ಕಳಿಗೂ ಅವರ ಪೋಷಕರಿಂದಲೇ ಈ ಸೋಂಕು ತಗುಲಿರುವುದು ನಂತರದ ದಿನಗಳಲ್ಲಿ ಪತ್ತೆಯಾಗಿದೆ. ಜಿಲ್ಲೆಯಲ್ಲಿ ಎರಡು ಖಾಸಗಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗಿತ್ತು. ಆನಂತರ ಶಾಲೆಗೆ ಒಂದು ವಾರ ಕಾಲ ರಜೆ ನೀಡಲಾಗಿತ್ತು ಎಂದು ತಿಳಿಸಿದ್ದಾರೆ.
ಜಿಲ್ಲೆಯ ಕುಣಿಗಲ್ ತಾಲೂಕಿನಲ್ಲಿ ಒಂದು ಅನುದಾನ ರಹಿತ ಶಾಲೆಯ ಹಾಗೂ ಅನುದಾನ ಸಹಿತ ಶಾಲೆಯ ಇಬ್ಬರು ವಿದ್ಯಾರ್ಥಿಗಳಿಗೆ ಸೋಂಕು ತಗುಲಿತ್ತು. ತುರುವೇಕೆರೆ ತಾಲೂಕಿನ ಸರ್ಕಾರಿ ಪ್ರಾಥಮಿಕ ಶಾಲೆಯ ಓರ್ವ, ತುಮಕೂರು ತಾಲೂಕಿನ ಬೆಳಗುಂಬ ಸರ್ಕಾರಿ ಪ್ರಾಥಮಿಕ ಶಾಲೆಯ ಓರ್ವ ವಿದ್ಯಾರ್ಥಿ ಹಾಗೂ ಜೈನ್ ಪಬ್ಲಿಕ್ ಸ್ಕೂಲ್ ಓರ್ವ ವಿದ್ಯಾರ್ಥಿಗೆ ಸೋಂಕು ತಗುಲಿತ್ತು ಎಂದಿದ್ದಾರೆ.
ಓದಿ: ಬೆಳಗಾವಿ ಬಳಿ ಭೀಕರ ಅಪಘಾತ: ಸ್ಥಳದಲ್ಲೇ ಮೂವರು ಸಾವು, ಇಬ್ಬರ ಸ್ಥಿತಿ ಗಂಭೀರ