ತುಮಕೂರು : ಬ್ಯಾಂಕಿನ ಹಣ ಲಪಟಾಯಿಸುವ ಉದ್ದೇಶದಿಂದ ದರೋಡೆ ಕಥೆ ಕಟ್ಟಿದ ಇಬ್ಬರು ಆರೋಪಿಗಳನ್ನು ಶಿರಾ ಪೊಲೀಸರು ಬಂಧಿಸಿ 7,53,000 ರೂ. ವಶಕ್ಕೆ ಪಡೆದಿದ್ದಾರೆ. ಶಿರಾ ತಾಲೂಕು ಚಿಕ್ಕದಾಸರಹಳ್ಳಿಯ ನಟರಾಜ ಹಾಗೂ ಭೂಪಸಂದ್ರ ಅಶೋಕ್ ಎಂಬಿಬ್ಬರು ಬಂಧಿತ ಆರೋಪಿಗಳು.
ಆರೋಪಿಗಳು ಸೃಷ್ಟಿಸಿದ ಕಟ್ಟುಕತೆ : ಜುಲೈ 15ರಂದು 10.30ರ ಸುಮಾರಿಗೆ ಶಿರಾ ತಾಲೂಕು ಎರಗುಂಟೆ ಗೇಟ್ ಕಡೆಯಿಂದ ಬರುತ್ತಿರುವ ಸಂದರ್ಭದಲ್ಲಿ ಉಲ್ಲಾಸ್ ತೋಪಿನ ಬಳಿ ಇಬ್ಬರು ಅಪರಿಚಿತ ವ್ಯಕ್ತಿಗಳು ಕಣ್ಣಿಗೆ ಖಾರದ ಪುಡಿ ಎರಚಿ, ಹಲ್ಲೆ ನಡೆಸಿ 7,53,000 ರೂ. ಕಿತ್ತುಕೊಂಡು ಹೋಗಿದ್ದಾರೆ ಎಂದು ಕೋಟಕ್ ಮಹೀಂದ್ರಾ ಬ್ಯಾಂಕ್ನಲ್ಲಿ ರಿಕವರಿ ಎಕ್ಸಿಕ್ಯೂಟಿವ್ ಆಗಿದ್ದ ನಟರಾಜ, ಶಿರಾ ಪೊಲೀಸ್ ಠಾಣೆಗೆ ದೂರು ನೀಡಿದ್ದ.
ಪ್ರಕರಣದ ಕುರಿತು ತನಿಖೆ ಆರಂಭಿಸಿದ ಶಿರಾ ಪೊಲೀಸರು ಬ್ಯಾಂಕ್ ಗ್ರಾಹಕ ಚಿದಾನಂದ್, ಕೋಟಕ್ ಮಹೀಂದ್ರಾ ಬ್ಯಾಂಕ್ನಲ್ಲಿ ರಿಕವರಿ ಎಕ್ಸಿಕ್ಯೂಟಿವ್ ಆಗಿದ್ದ ನಟರಾಜ ಮತ್ತು ಆತನ ಸ್ನೇಹಿತ ಅಶೋಕನನ್ನು ವಿಚಾರಣೆಗೆ ಒಳಪಡಿಸಿದ್ದರು. ಆದರೆ, ವಿಚಾರಣೆ ಸಂದರ್ಭದಲ್ಲಿ ಈ ಮೂವರು ಆರೋಪಿಗಳು ಹಣ ಬಚ್ಚಿಟ್ಟು, ದರೋಡೆಯಾದಂತೆ ಕಥೆ ಕಟ್ಟಿದ್ದಾರೆ ಎಂಬುದು ಬೆಳಕಿಗೆ ಬಂದಿದೆ.
ಪ್ರಕರಣ ಸಂಬಂಧ ಆರೋಪಿಗಳು ಬಚ್ಚಿಟ್ಟಿರುವ ಹಣ, ಕೃತ್ಯಕ್ಕೆ ಬಳಸಿದ ಎರಡು ಮೋಟಾರ್ ಸೈಕಲ್, 3 ಮೊಬೈಲ್ ಸೇರಿ ಇತರ ಕೆಲ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.