ಬೆಂಗಳೂರು: ರಾಜ್ಯದ ನೆರೆಪೀಡಿತ ಜಿಲ್ಲೆಗಳಲ್ಲಿ ಪರಿಹಾರ ಕಾರ್ಯಾಚರಣೆಗೆ ಆಯಾ ಜಿಲ್ಲಾಧಿಕಾರಿಗಳ ಪಿಡಿ ಖಾತೆ ಮತ್ತು ಎನ್ಡಿಆರ್ಎಫ್ ನಲ್ಲಿರುವ ನಿಧಿ ಬಳಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೂಚನೆ ನೀಡಿದ್ದಾರೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಉಂಟಾಗಿರುವ ಮಳೆ, ನೆರೆ ಹಾನಿ ಹಿನ್ನೆಲೆಯಲ್ಲಿ ಸಿಎಂ ವಿಡಿಯೋ ಕಾನ್ಫರೆನ್ಸ್ ಮೂಲಕ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸುತ್ತಿದ್ದು, ಸಭೆಯಲ್ಲಿ ಕಲಬುರಗಿ, ಯಾದಗಿರಿ, ರಾಯಚೂರು, ಬೀದರ್, ಕೊಪ್ಪಳ, ಧಾರವಾಡ ಸೇರಿದಂತೆ ಮಳೆ ಪೀಡಿತ ಜಿಲ್ಲೆಗಳ ಡಿಸಿಗಳು, ಎಸ್ ಪಿಗಳು, ಜಿ.ಪಂ. ಸಿಇಒ, ಸಿ.ಎಸ್. ವಿಜಯಭಾಸ್ಕರ್, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ವಿಪತ್ತು ನಿರ್ವಹಣಾ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದಾರೆ.
ಸಭೆಯಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ, ನದಿ ಪಾತ್ರದ ಗ್ರಾಮಗಳ ಜನರ ರಕ್ಷಣೆ, ಸ್ಥಳಾಂತರ ಮತ್ತು ಜಾನುವಾರುಗಳ ರಕ್ಷಣೆಗೆ ಸೂಚಿಸಿದರು. ಜೊತೆಗೆ ಜಾನುವಾರುಗಳಿಗೆ ಮೇವು ಕೊರತೆಯಾಗದಂತೆ ನೋಡಿಕೊಳ್ಳಬೇಕು, ದಕ್ಷತೆ ಮತ್ತು ಮಾನವೀಯತೆಯಿಂದ ಪ್ರವಾಹ ಪರಿಹಾರ ಕಾರ್ಯಗಳನ್ನು ನಿರ್ವಹಿಸಬೇಕು, ಜಿಲ್ಲಾ ಉಸ್ತುವಾರಿ ಸಚಿವರ ಮಾರ್ಗದರ್ಶನದಲ್ಲಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸಿಎಂ ನಿರ್ದೇಶನ ನೀಡಿದರು.