ಮಂಗಳೂರು : ಪಠ್ಯಪುಸ್ತಕ ಪರಿಷ್ಕರಣೆ ವಿವಾದಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವರ ವರದಿ ಸಿಕ್ಕ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದರು. ಮಂಗಳೂರು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಕ್ಷಣ ಸಚಿವ ನಾಗೇಶ್ ಅವರಿಗೆ ವರದಿ ನೀಡುವಂತೆ ಹೇಳಿದ್ದೇನೆ. ನಾಳೆ ಬೆಂಗಳೂರಿಗೆ ಹೋದ ತಕ್ಷಣವೇ ವರದಿ ಪಡೆದು ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಸಂಪೂರ್ಣವಾಗಿ ಎಲ್ಲಾ ಆಯಾಮಗಳ ಬಗ್ಗೆ ವಿಷಯಗಳನ್ನು ವರದಿ ಮೂಲಕ ಸಲ್ಲಿಸುವುದಾಗಿ ಸಚಿವ ನಾಗೇಶ್ ತಿಳಿಸಿದ್ದಾರೆ. ಶ್ರೀ ಆದಿ ಚುಂಚನಗಿರಿ ಸ್ವಾಮೀಜಿ ಭೇಟಿ ಮಾಡಿ ಮಾತನಾಡಿದ್ದಾರೆ. ಸತ್ಯಾಂಶವನ್ನು ಆಧಾರ ಸಮೇತ ವಿವರಿಸುವುದಾಗಿ ಹೇಳಿದ್ದಾರೆ ಎಂದು ತಿಳಿಸಿದರು. ಮಳಲಿ ಮಸೀದಿ ವಿಚಾರ ನ್ಯಾಯಾಲಯದಲ್ಲಿರುವುದರಿಂದ ಈ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದರು.
ಏನಿದು ವಿವಾದ? : ಪಠ್ಯ ಪರಿಷ್ಕರಣೆ ವಿವಾದ ಹೊಸ ಸ್ವರೂಪದ ಜತೆಗೆ ಎರಡು ಆಯಾಮ ಪಡೆದುಕೊಂಡಿದೆ. ಒಂದು ಕಡೆ ಪಠ್ಯಪುಸ್ತಕದಿಂದ ತಮ್ಮ ಲೇಖನ ಕೈಬಿಡುವಂತೆ ಸಾಹಿತಿಗಳು ಆಗ್ರಹ ಮಾಡುತ್ತಿದ್ದರೆ, ಮತ್ತೊಂದೆಡೆ ಪ್ರತಿಷ್ಠಾನಗಳಿಂದ ಸಾಹಿತಿಗಳು ಹೊರ ನಡೆಯುತ್ತಿದ್ದಾರೆ. ಇದರಿಂದಾಗಿ ವಿವಾದ ಮತ್ತಷ್ಟು ಜಟಿಲವಾಗುವಂತಾಗಿದೆ. ಸರ್ಕಾರಕ್ಕೆ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಬಿಸಿತುಪ್ಪವಾಗಿ ಪರಿಣಮಿಸಿದೆ.
ನಾಡಗೀತೆಗೆ ಅಪಮಾನ ಮಾಡಿದವರ ವಿರುದ್ಧ ಕ್ರಮಕೈಗೊಳ್ಳದ ಸರ್ಕಾರದ ಧೋರಣೆ ಖಂಡಿಸಿ ಕುವೆಂಪು ಅವರ ಅವಮಾನವನ್ನು ಪ್ರತಿಭಟಿಸಿ, ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ಹಂಪ ನಾಗರಾಜಯ್ಯ ಹಾಗೂ ರಾಷ್ಟ್ರಕವಿ ಡಾ. ಜಿ.ಎಸ್ ಶಿವರುದ್ರಪ್ಪ ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಎಸ್ ಜಿ ಸಿದ್ದರಾಮಯ್ಯ ತಮ್ಮ ತಮ್ಮ ಅಧ್ಯಕ್ಷ ಸ್ಥಾನಗಳಿಗೆ ರಾಜೀನಾಮೆ ಕೊಟ್ಟಿದ್ದಾರೆ.
ಹಂಪನಾ ಅಧ್ಯಕ್ಷ ಸ್ಥಾನದ ಜೊತೆಗೆ ಪ್ರತಿಷ್ಠಾನದ ಸದಸ್ಯ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ. ಇನ್ನು ಜಿಎಸ್ಎಸ್ ಪ್ರತಿಷ್ಠಾನದ ಅಧ್ಯಕ್ಷ ಸ್ಥಾನಕ್ಕೆ ಪ್ರೊ. ಎಸ್.ಜಿ ಸಿದ್ದರಾಮಯ್ಯ ರಾಜೀನಾಮೆ ಬೆನ್ನಲ್ಲೇ ಪ್ರತಿಷ್ಠಾನದ ಸದಸ್ಯರಾದ ಡಾ.ಹೆಚ್.ಎಸ್.ರಾಘವೇಂದ್ರ ರಾವ್, ಡಾ.ಚಂದ್ರಶೇಖರ್ ನಂಗಲಿ,ಡಾ.ನಟರಾಜ ಬೂದಾಳು ತಮ್ಮ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ನಡೆದಿದ್ದಾರೆ.
(ಇದನ್ನೂ ಓದಿ: 'ಸುಳ್ಳು ಹೇಳಬಾರದು' ಪಠ್ಯದಿಂದ ಕಿತ್ತುಹಾಕಿ: ಸಾಹಿತಿ ಬೊಳುವಾರು ಮಹಮದ್ ಕುಂಞಿ)