ಬೆಂಗಳೂರು : ವಯಸ್ಸಾಗಿದೆ ಎನ್ನುವ ನೆಪವೊಡ್ಡಿ ಸಚಿವ ಸ್ಥಾನ ನೀಡದೆ ಈಗ ಲೋಕಸಭೆ ಚುನಾವಣೆಗೆ ನಿಲ್ಲುವಂತೆ ಒತ್ತಡ ಹೇರಿ ಕಾಂಗ್ರೆಸ್ ಪಕ್ಷ ದ್ವಂದ್ವ ನಿಲುವು ತಳೆದಿದೆ ಎಂದು ಹಿರಿಯ ರಾಜಕಾರಣಿ ಶಾಮನೂರು ಶಿವಶಂಕರಪ್ಪ ಅತೃಪ್ತಿ ವ್ಯಕ್ತಪಡಿಸಿದ್ದಾರೆಂದು ಹೇಳಲಾಗುತ್ತಿದೆ.
ಸಚಿವ ಸ್ಥಾನ ನೀಡಲು ಒಂದು ಮಾನದಂಡ, ಲೋಕಸಭೆ ಚುನಾವಣೆಗೆ ಟಿಕೆಟ್ ನೀಡಲು ಮತ್ತೊಂದು ಮಾನದಂಡವನ್ನು ಅನುಸರಿಸಿದ ಕಾಂಗ್ರೆಸ್‌ನ ನಿಲುವಿನ ಬಗ್ಗೆ ಬೇಸರ ಪಟ್ಟಿರುವ ಅವರು, ಆಪ್ತರಲ್ಲಿ ಚುನಾವಣೆಗೆ ಸ್ಪರ್ಧಿಸಲು ತಮಗೆ ಆಸಕ್ತಿಯೇ ಇಲ್ಲವೆನ್ನುವ ಅಭಿಪ್ರಾಯ ಹಂಚಿಕೊಂಡಿದ್ದಾರೆಂದು ತಿಳಿದುಬಂದಿದೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನ ನೀಡದಿರುವುದು ಹಾಗೂ ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಸರ್ಕಾರದಲ್ಲಿ ನೀಡಿದ್ದ ಮಂತ್ರಿ ಪದವಿ ವಾಪಾಸ್ ಪಡೆದಿದ್ದಕ್ಕೆ ಕಾಂಗ್ರೆಸ್ ಪಕ್ಷದ ಒಳ ರಾಜಕೀಯ ಚಟುವಟಿಕೆಗಳ ಬಗ್ಗೆ ಶಿವಶಂಕರಪ್ಪನವರು ಅಸಮಾಧಾನ ಹೊಂದಿದ್ದಾರೆಂದು ಹೇಳಲಾಗುತ್ತಿದೆ. ಲೋಕಸಭೆ ಚುನಾವಣೆ ಟಿಕೆಟ್ ಬೇಡವೆಂದರೂ ತಮಗೆ ಪಕ್ಷ ನೀಡಿದೆ. 80ಕ್ಕೂ ಹೆಚ್ಚು ವಯಸ್ಸಾಗಿರುವ ತಾವು ಹೇಗೆ ಚುನಾವಣೆಯಲ್ಲಿ ಪ್ರಚಾರ ಮಾಡುವುದು ಎಂದು ಶಿವಶಂಕರಪ್ಪನವರು ಪಕ್ಷದ ಹಿರಿಯ ಮುಖಂಡರಿಗೆ ಪ್ರಶ್ನಿಸಿದ್ದಾರೆನ್ನಲಾಗಿದೆ.
ಶಿವಶಂಕರಪ್ಪನವರ ಈ ನಡೆ ಗಮನಿಸಿದರೆ ದಾವಣಗೆರೆ ಲೋಕಸಭೆ ಚುನಾವಣೆಯಲ್ಲಿ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಅನುಮಾನವೆಂದು ಅವರನ್ನು ಹತ್ತಿರದಿಂದ ಬಲ್ಲವರು ಅಭಿಪ್ರಾಯಪಡುತಿದ್ದಾರೆ.
ತಾವು ಚುನಾವಣೆಗೆ ನಿಲ್ಲುವುದಿಲ್ಲ ಬೇರೆಯವರಿಗೆ ಟಿಕೆಟ್ ಕೊಡಿ ಎನ್ನುವ ಸಂದೇಶವನ್ನು ಸಹ ಶಾಮನೂರು ಶಿವಶಂಕರಪ್ಪನವರು ರವಾನಿಸಿದ್ದಾರೆಂದು ಉನ್ನತ ಮೂಲಗಳು 'ಈಟಿವಿ ಭಾರತ'ಕ್ಕೆ ತಿಳಿಸಿವೆ.
ಈ ಬಗೆಗಿನ ಸುದ್ದಿಯನ್ನು ಖಚಿತಪಡಿಸಿಕೊಳ್ಳಲು ಶಿವಶಂಕರಪ್ಪನವರನ್ನು ಸಂಪರ್ಕಿಸಿದಾಗ, ಕಾಂಗ್ರೆಸ್ ಪಕ್ಷ ತಮಗೆ ಹೆಚ್ಚು ವಯಸ್ಸಾಗಿದೆ ಎಂದು ಸಚಿವ ಸ್ಥಾನ ನೀಡಲು ನಿರಾಕರಿಸಿತ್ತು. ಈಗ ವಯಸ್ಸಾದ ತಮಗೆ ಕೇಳದಿದ್ದರೂ ಲೋಕಸಭೆ ಟಿಕೆಟ್ ನೀಡಿ ಸ್ಪರ್ದೆ ಮಾಡಲು ಒತ್ತಡ ಹೇರುತ್ತಿದೆ ಎಂದು ಪ್ರತಿಕ್ರಿಯಿಸಿದರು.
ದಾವಣಗೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವ ಬಗ್ಗೆ ಇನ್ನೂ ತೀರ್ಮಾನ ತೆಗೆದುಕೊಂಡಿಲ್ಲ. ಒಂದೆರಡು ದಿನಗಳಲ್ಲಿ ನಿರ್ಧಾರಕ್ಕೆ ಬರಲಾಗುವುದು ಎಂದು ಹೇಳಿದರು.