ಬೆಳ್ತಂಗಡಿ: ಉಜಿರೆ ಎಸ್ಡಿಎಂ ಪಾಲಿಟೆಕ್ನಿಕ್ ಕಾಲೇಜು ಉಪನ್ಯಾಸಕರು 'ಆಟೋಮ್ಯಾಟಿಕ್ ಹ್ಯಾಂಡ್ ಸ್ಯಾನಿಟೈಸರ್ ಡಿಸ್ಪೆನ್ಸರ್’ಗಳನ್ನು ತಯಾರಿಸುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಮಾರುಕಟ್ಟೆ ಬೆಲೆಗಿಂತ ಅತ್ಯಂತ ಕಡಿಮೆ ದರದಲ್ಲಿ ಸಿದ್ಧಪಡಿಸಲಾಗಿದ್ದು, ಜನಸಾಮಾನ್ಯರಿಗೆ, ಸಂಘ, ಸಂಸ್ಥೆಗಳಿಗೆ ಹೀಗೆ ಎಲ್ಲರಿಗೂ ಬಳಕೆಗೆ ಯೋಗ್ಯವಾಗಿದೆ.
ಮಾರುಕಟ್ಟೆಯಲ್ಲಿ ಕಾಲಿನಿಂದ ಬಳಸಬಹುದಾದ ಡಿಸ್ಪೆನ್ಸರ್‌ಗಳು ಲಭ್ಯವಿದ್ದರೂ ಬಳಕೆಯ ದೃಷ್ಟಿಯಿಂದ ಒಂದಷ್ಟು ಅನಾನುಕೂಲಗಳಿವೆ. ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಬಿ.ಯಶೋವರ್ಮ ಮಾರ್ಗದರ್ಶನ ಮತ್ತು ಉಜಿರೆಯ ಎಸ್ಡಿಎಂ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕ ವರ್ಗದ ಕಾರ್ಯವೈಖರಿಯಿಂದ ಈ ಆಟೋಮ್ಯಾಟಿಕ್ ಹ್ಯಾಂಡ್ ಸ್ಯಾನಿಟೈಸರ್ ಡಿಸ್ಪೆನ್ಸೆರ್ ತಯಾರಾಗಿದೆ.
ಯಂತ್ರದ ಕಾರ್ಯವೈಖರಿ:
ಈ ಯಂತ್ರದ ತಾಂತ್ರಿಕ ಕಾರ್ಯವೈಖರಿ ಅತ್ಯುನ್ನತ ಮಟ್ಟದ್ದು. ಇದೊಂದು ವಿದ್ಯುತ್ ಚಾಲಿತ ಯಂತ್ರವಾಗಿದ್ದು, ಅಲ್ಟ್ರಾಸಾನಿಕ್ ಸೆನ್ಸರ್ ಮೂಲಕ ಕಾರ್ಯನಿರ್ವಹಿಸುತ್ತದೆ. ಯಂತ್ರದ ನಿರ್ದಿಷ್ಟ ಭಾಗದಲ್ಲಿ ಕೈಯನ್ನು ಹಿಡಿದಾಗ, ಇದರಲ್ಲಿರುವ ಸೆನ್ಸರ್‌ಗಳು ಚಲನೆಯನ್ನು ಗುರುತಿಸಿ ಹ್ಯಾಂಡ್ ಸ್ಯಾನಿಟೈಸರ್ ಅನ್ನು ಕೈಗಳಿಗೆ ಸಿಂಪಡಿಸುತ್ತದೆ. ಹೀಗಾಗಿ ಯಾರೊಬ್ಬರೂ ಈ ಯಂತ್ರವನ್ನು ಮುಟ್ಟುವ ಪ್ರಮೇಯವೇ ಇಲ್ಲ.
ಈಗಾಗಲೇ ಲಭ್ಯವಿರುವ ಕಾಲಿನಿಂದ ಬಳಸುವ ಡಿಸ್ಪೆನ್ಸರ್‌ಗಳ ಸರಿ ಸುಮಾರು ದರದಲ್ಲಿ ಸಂಪೂರ್ಣ ಸ್ವಯಂಚಾಲಿತ ಡಿಸ್ಪೆನ್ಸರ್ ನಿರ್ಮಿಸಿರುವುದು ಬಳಕೆದಾರರಿಗೂ ಅನುಕೂಲವಾಗುತ್ತದೆ.

ಸಾಧನೆಗೆ ಮೆಚ್ಚುಗೆ:
ಸದ್ಯ ಪ್ರಥಮ ಆಟೋಮ್ಯಾಟಿಕ್ ಸ್ಯಾನಿಟೈಸರ್ ಡಿಸ್ಪೆನ್ಸರ್ ಯಂತ್ರವನ್ನು ಧರ್ಮಸ್ಥಳಕ್ಕೆ ಅರ್ಪಿಸಲಾಗಿದೆ. ಇದನ್ನು ಪರೀಕ್ಷಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮೆಚ್ಚುಗೆ ವ್ಯಕ್ತಪಡಿಸಿ, ಮತ್ತಷ್ಟು ಅನ್ವೇಷಣೆಗಳನ್ನು ನಡೆಸಲು ಪ್ರೋತ್ಸಾಹಿಸಿದ್ದಾರೆ.
ಶಿಕ್ಷಣ ಸಂಸ್ಥೆಗಳಂತಹ ಕೇಂದ್ರಗಳಲ್ಲಿ ಹ್ಯಾಂಡ್ ಸ್ಯಾನಿಟೈಸೇಷನ್‌ಗೆ ಪೂರಕವಾಗಿ ಸ್ಯಾನಿಟೈಸರ್‌ಗಳ ಬಳಕೆಗೆ ಮಾರ್ಗಸೂಚಿಗಳೂ ಬಂದಿವೆ. ಸ್ಯಾನಿಟರಿ ಬಾಟಲ್‌ಗಳನ್ನು ಮುಟ್ಟುವ ಪ್ರಸಂಗ ಬರಬಹುದು. ಇದೂ ಅಪಾಯಕಾರಿ. ಇದಕ್ಕಾಗಿ ತಂತ್ರಜ್ಞಾನ ಬಳಸಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಯೋಚಿಸಿದಾಗ ’ಆಟೋಮ್ಯಾಟಿಕ್ ಹ್ಯಾಂಡ್ ಸ್ಯಾನಿಟೈಸರ್ ಡಿಸ್ಪೆನ್ಸರ್’ಗಳನ್ನು ಬಳಸುವ ಕುರಿತು ಯೋಚನೆ ಬಂತು. ಮಾರುಕಟ್ಟೆಗಳಲ್ಲಿ ವಿಚಾರಿಸಿದಾಗ 6 ಸಾವಿರಕ್ಕಿಂತ ಕಡಿಮೆ ಬೆಲೆಯ ಯಾವುದೇ ಆಟೋಮ್ಯಾಟಿಕ್ ಡಿಸ್ಪೆನ್ಸರ್‌ಗಳು ಲಭ್ಯವಿರಲಿಲ್ಲ ಎಂದು ಕಾಲೇಜಿನ ಪ್ರಿನ್ಸಿಪಾಲ್ ಕೆ. ಪಿ. ಪ್ರಸಾದ್ ಮಾಹಿತಿ ನೀಡಿದರು.