ಬೆಂಗಳೂರು: ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆ ನಡೆಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ಮುಂದಾಗಿದೆ. ಈ ನಿಟ್ಟಿನಲ್ಲಿ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದ್ದು, ಪ್ರಾಯೋಗಿಕ ಪರೀಕ್ಷೆಗಳನ್ನು ಆಯಾ ಕಾಲೇಜಿನ ಹಂತದಲ್ಲಿಯೇ ನಡೆಸುವುದು.ಈ ಬಗ್ಗೆ ಪ್ರಾಂಶುಪಾಲರಿಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.
ಪ್ರತಿ ದಿನ ಪರೀಕ್ಷೆ ಮುಗಿದ ನಂತರ ತಮಗೆ ನಿಯೋಜಿಸಿದ ಪರೀಕ್ಷಾ ಕೇಂದ್ರದಲ್ಲಿ ಅಂಕಗಳನ್ನು ಆನ್ಲೈನ್ ಮೂಲಕ ನಮೂದಿಸಲು ಆಯಾ ಕಾಲೇಜಿನ ಸೂಕ್ತ ಮಾರ್ಗದರ್ಶನ ನೀಡುವುದು. ಏಪ್ರಿಲ್ 28 ರಿಂದ ಮೇ 18 ರವೆರೆಗೆ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಯಲಿದ್ದು, ವಿದ್ಯಾರ್ಥಿಗಳು ವ್ಯಾಸಂಗ ಮಾಡುವ ಕಾಲೇಜುಗಳಲ್ಲಿಯೇ ನಡೆಸಲು ತೀರ್ಮಾನಿಸಲಾಗಿದೆ.
ಪರೀಕ್ಷೆ ಹಾಜರಾತಿಗೆ ಹಲವು ರೂಲ್ಸ್
ಪರೀಕ್ಷೆ ಬರೆಯಲು ಬರುವ ವಿದ್ಯಾರ್ಥಿಗಳ ಟೆಂಪರೇಚರ್ ಪರೀಕ್ಷಿಸಿ ಒಳಗೆ ಪ್ರವೇಶ ನೀಡಬೇಕು. ಈಗಾಗಲೇ ಪ್ರಾಯೋಗಿಕ ಪರೀಕ್ಷೆಯ ಲೇಖನ ಸಾಮಗ್ರಿಗಳನ್ನು ಜಿಲ್ಲಾ ಉಪನಿರ್ದೇಶಕರ ಕಚೇರಿಗೆ ಪೂರೈಸಲಾಗಿದೆ. ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರುಗಳು ಇವುಗಳನ್ನು ಪಡೆದುಕೊಂಡು ತಮ್ಮ ಕೇಂದ್ರಕ್ಕೆ ಟ್ಯಾಗ್ ಆಗಿರುವ ಕಾಲೇಜುಗಳ ಪ್ರಾಂಶುಪಾಲರಿಗೆ ಆ ಕಾಲೇಜಿನ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಉತ್ತರ ಪತ್ರಿಕೆಗಳು ಮತ್ತು ಅಂಕಪಟ್ಟಿಯನ್ನು ನೀಡಿ ಪ್ರತಿದಿನ ಟ್ಯಾಗ್ ಆಗಿರುವ ಕಾಲೇಜುಗಳ ವಿವಿಧ ವಿಷಯಗಳ ಉಪನ್ಯಾಸಕರುಗಳು ಪ್ರಾಯೋಗಿಕ ಪರೀಕ್ಷಾ ಕೇಂದ್ರಕ್ಕೆ ಬಂದು ಅಂಕಗಳನ್ನು ನಮೂದಿಸಬೇಕು.
ನಾಮಿನಲ್ ರೋಲ್ ಮತ್ತು ಅಂಕ ಪಟ್ಟಿಯನ್ನು ನೀಡಿ ಪ್ರಾಯೋಗಿಕ ಪರೀಕ್ಷೆಯನ್ನು ತಮ್ಮ ಕಾಲೇಜು ಹಂತದಲ್ಲಿ ನಡೆಸಿ ಆಯಾ ದಿನದಂದೇ ಪ್ರಾಯೋಗಿಕ ಪರೀಕ್ಷಾ ಕೇಂದ್ರಕ್ಕೆ ಉತ್ತರ ಪತ್ರಿಕೆ ಮತ್ತು ಭರ್ತಿ ಮಾಡಿದ ಅಂಕ ಪಟ್ಟಿಗಳನ್ನು ಹಿಂದಿರುಗಿ ಆನ್ಲೈನ್ನಲ್ಲಿ ಪ್ರಾಯೋಗಿಕ ಪರೀಕ್ಷೆಯ ಅಂಕಗಳನ್ನು ನಮೂದಿಸಬೇಕು. ಪರೀಕ್ಷೆ ಕೇಂದ್ರದ ಎಲ್ಲ ಪರೀಕ್ಷೆಗಳು ಮುಗಿದ ನಂತರ ಉತ್ತರ ಪತ್ರಿಕೆಗಳನ್ನು ಬಂಡಲ್ ಮಾಡಿ ನೇರವಾಗಿ ಕೇಂದ್ರ ಕಚೇರಿಗೆ ಕಳುಹಿಸಬೇಕು ಮತ್ತು ಅಂಕಪಟ್ಟಿಗಳನ್ನು ಉರ್ದೇಶಕರ ಕಚೇರಿಗೆ ಸಲ್ಲಿಸಬೇಕು.
ಆಯಾ ಕಾಲೇಜಿನ ಉಪನ್ಯಾಸಕರನ್ನ ಪರೀಕ್ಷಾ ಕೆಲಸಕ್ಕೆ ಬಳಸಿಕೊಳ್ಳಬೇಕು,ಕೋವಿಡ್-19ರ ಹಿನ್ನೆಲೆಯಲ್ಲಿ ಹೊರಗಿನ ಉಪನ್ಯಾಸಕರನ್ನ ಕರೆತರುವಂತಿಲ್ಲ.
ಕಲಾ ಮತ್ತು ವಾಣಿಜ್ಯ ವಿಭಾಗದಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಸುವ ವಿಷಯಗಳಿದ್ದಲ್ಲಿ (ಉದಾ : ಕಂಪ್ಯೂಟರ್ ಸೈನ್ಸ್ ಮತ್ತು ಹೋಂ ಸೈನ್ಸ್) ಕಾಲೇಜಿನ ನಿಗಧಿತ ದಿನಾಂಕದೊಳಗೆ ಪರೀಕ್ಷೆ ನಡೆಸಲು ಸೂಚಿಸಿದೆ. ಕಾಲೇಜುಗಳಲ್ಲಿ ಯಾವುದೇ ಕಾರಣಕ್ಕೂ ಪರೀಕ್ಷಾರ್ಥಿಗಳನ್ನು ಬಿಟ್ಟು ಬೇರೆ ವಿದ್ಯಾರ್ಥಿಗಳನ್ನು ಸೇರಿಸುವಂತಿಲ್ಲ. ಎಲ್ಲ ಸಂದರ್ಭಗಳಲ್ಲಿ ಹಾಗೂ ವಿಶೇಷವಾಗಿ ಪರೀಕ್ಷೆ ನಡೆಯುವ ದಿನಗಳಂದು ಇಲಾಖೆ ನೀಡಿರುವ SOP ಯನ್ನು ಕಡ್ಡಾಯವಾಗಿ ಮತ್ತು ಕಟ್ಟುನಿಟ್ಟಿನಿಂದ ಪರಿಪಾಲಿಸುವುದು.
ಸರ್ಕಾರದ ಆದೇಶದಂತೆ ವಾರಾಂತ್ಯದಲ್ಲಿ ಸಂಪೂರ್ಣ ಲಾಕ್ ಡೌನ್ ಹಿನ್ನೆಲೆ ಶನಿವಾರ ಹಾಗೂ ಭಾನುವಾರಗಳಂದು ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸುವಂತಿಲ್ಲ. ಕೇಂದ್ರ ಕಚೇರಿ ವತಿಯಿಂದ ಪ್ರಾಯೋಗಿಕ ಪರೀಕ್ಷೆಯ ಆಯ್ದ ಉತ್ತರ ಪತ್ರಿಕೆಗಳನ್ನು ಪರಿಶೀಲಿಸಲಾಗುವುದು. ಏನಾದರೂ ಮೌಲ್ಯಮಾಪನದಲ್ಲಿ ಲೋಪಗಳು ಕಂಡು ಬಂದಲ್ಲಿ ಸಂಬಂಧಿಸಿದ ಪ್ರಾಂಶುಪಾಲರನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು.