ತುಮಕೂರು: 2005ರ ಫೆ.5 ರಂದು ಪಾವಗಡದ ವೆಂಕಟಮ್ಮನಹಳ್ಳಿಯಲ್ಲಿ ಕೆಎಸ್ಆರ್ಪಿ ಕ್ಯಾಂಪ್ ಮೇಲೆ ನಕ್ಸಲ್ ದಾಳಿ ನಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕವಿ ವರವರ ರಾವ್ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಎರಡು ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಿ ಪಾವಗಡ ಜೆಎಂಎಫ್ಸಿ ನ್ಯಾಯಾಲಯ ಆದೇಶ ಹೊರಡಿಸಿದೆ.
ತಿರುಮಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಈ ಪ್ರಕರಣದಲ್ಲಿ ವರವರ ರಾವ್ 12ನೇ ಆರೋಪಿಯಾಗಿದ್ದರು. ಅಲ್ಲದೆ ಇವರ ವಿರುದ್ಧ ಚಾರ್ಜ್ ಶೀಟ್ ಕೂಡ ದಾಖಲಾಗಿತ್ತು. ವರವರ ವಿರುದ್ಧ ಜಾಮೀನು ರಹಿತ ವಾರೆಂಟ್ ಕೂಡ ಜಾರಿಯಾಗಿತ್ತು. ಆದರೆ, ಪುಣೆಯ ಯೆರವಾಡ ಜೈಲಿನಲ್ಲಿ ಯುಟಿಪಿ ನಂಬರ್ 3669/11 ವಿಚಾರಣಾಧೀನ ಕೈದಿಯಾಗಿ ವರವರ ರಾವ್ ಇದ್ದರು. ಬಾಡಿ ವಾರೆಂಟ್ನೊಂದಿಗೆ ಅವರನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ಇಂದು ಪಾವಗಡದ ಜೆಎಂಎಫ್ಸಿ ಕೋರ್ಟ್ಗೆ ಹಾಜರುಪಡಿಸಿದ್ದರು. ಇಂದು ವಿಚಾರಣೆ ನಡೆಸಿದ ನ್ಯಾಯಾಲಯವು ಹೆಚ್ಚಿನ ವಿಚಾರಣೆಗಾಗಿ ಎರಡು ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಿದೆ.
ಕೆಎಸ್ಆರ್ಪಿ ಕ್ಯಾಂಪ್ ಮೇಲೆ ದಾಳಿ ನಡೆಸಿದ ಪ್ರಕರಣದಲ್ಲಿ ಒಟ್ಟು 78 ಮಂದಿ ಆರೋಪಿಗಳಿದ್ದಾರೆ. ಈ ಪೈಕಿ ಕೆಲ ಆರೋಪಿಗಳು ಮೃತಪಟ್ಟಿದ್ದರೆ, 43 ಮಂದಿ ಕಣ್ಮರೆಯಾಗಿದ್ದಾರೆ. ಅಂದಿನ ನಕ್ಸಲ್ ದಾಳಿಯಲ್ಲಿ ಕೆಎಸ್ಆರ್ಪಿ ಪೊಲೀಸರು ಸೇರಿ ಏಳು ಜನ ಮೃತಪಟ್ಟಿದ್ದರು.
ಇಂದು ಬೆಳಗ್ಗೆ ವರವರ ರಾವ್ ಅವರನ್ನು ಪುಣೆಯಿಂದ ಕರೆತಂದಿದ್ದ ಪೊಲೀಸರು ತುಮಕೂರು ಜಿಲ್ಲಾ ಕಾರಾಗೃಹದಲ್ಲಿ ಇರಿಸಿದ್ದರು. ನಂತರ ಬೆ. 9ಗಂಟೆ ಪಾವಗಡ ಜಿಎಂಎಫ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲು ತುಮಕೂರು ಜಿಲ್ಲಾ ಕಾರಾಗೃಹದಿಂದ ಕರೆದೊಯ್ಯಲಾಗಿತ್ತು.