ದಾವಣಗೆರೆ: ಮಹಾಮಾರಿ ಕೊರೊನಾ ಈಗ ಮಕ್ಕಳನ್ನೂ ಬಿಡುತ್ತಿಲ್ಲ. ಕಳೆದ ವರ್ಷದ ಕೊರೊನಾ ಮೊದಲ ಅಲೆಯಲ್ಲಿ ಅಷ್ಟಾಗಿ ಮಕ್ಕಳಿಗೆ ಕೊರೊನಾ ತಗುಲಿರಲಿಲ್ಲ. ಅದ್ರೆ ಎರಡನೇ ಅಲೆಯಲ್ಲಿ ಶೇ. 10ರಷ್ಟು ಮಕ್ಕಳಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದ್ದು, ಅವರಿಗೆ ಚಿಕಿತ್ಸೆ ನೀಡಲು ವಿಶೇಷ ಮಕ್ಕಳ ವೈದ್ಯರನ್ನು ದಾವಣಗೆರೆ ಜಿಲ್ಲಾಡಳಿತ ನೇಮಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
ಹೌದು, ದಾವಣಗೆರೆಯಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದೆ. ಒಂದು ದಿನಕ್ಕೆ 300ರಿಂದ 400 ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿವೆ. ಅದರಲ್ಲಿ ಶೇ. 10ರಷ್ಟು ಮಕ್ಕಳಿಗೆ ಕೊರೊನಾ ವಕ್ಕರಿಸಿಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ. ಇದರಿಂದ ದಾವಣಗೆರೆ ಜಿಲ್ಲಾಡಳಿತ ನುರಿತ ಹಾಗೂ ಹಿರಿಯ ಮಕ್ಕಳ ವೈದ್ಯರನ್ನು ಮಕ್ಕಳ ಚಿಕಿತ್ಸೆಗಾಗಿ ನೇಮಿಸಿದ್ದು, ಚಿಕಿತ್ಸೆಯನ್ನು ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ನೀಡಲಾಗುತ್ತಿದೆ. ಪಾಸಿಟಿವ್ ವರದಿ ಬಂದ ಮಕ್ಕಳಿಗೆ ಪ್ರತ್ಯೇಕವಾದ ವಾರ್ಡ್ ಮಾಡುವ ಮೂಲಕ ಮಕ್ಕಳ ವೈದ್ಯರಿಂದ ಚಿಕಿತ್ಸೆ ನೀಡಿ ಗುಣಪಡಿಸಲಾಗುತ್ತಿದೆ.
ಎರಡನೇ ಅಲೆ ಮಕ್ಕಳ ಮೇಲೂ ಪರಿಣಾಮ ಬೀರುತ್ತಿರುವುದರಿಂದ ಪೋಷಕರು ಆತಂಕದಲ್ಲಿದ್ದಾರೆ. ಈವರೆಗೆ ಪಾಸಿಟಿವ್ ಬಂದಿರುವ ಮಕ್ಕಳಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ಡಿಹೆಚ್ಒ ಡಾ. ನಾಗರಾಜ್ ತಿಳಿಸಿದ್ದಾರೆ.
ಇನ್ನು ಈಗಾಗಲೇ ದಾವಣಗೆರೆಯಲ್ಲಿ ಎರಡನೇ ಅಲೆಗೆ ದಿನನಿತ್ಯ ಇಬ್ಬರಿಂದ ಕನಿಷ್ಠ ಮೂವರು ಕೊನೆಯುಸಿರೆಳೆಯುತ್ತಿದ್ದು, ಅದರಲ್ಲಿ ಸಾವನಪ್ಪಿದವರು ಬಹುತೇಕರು ದೊಡ್ಡವರಾಗಿದ್ದಾರೆ. ಈವರೆಗೆ 14 ವರ್ಷಕ್ಕಿಂದ ಕಡಿಮೆ ವಯಸ್ಸಿನ ಮಕ್ಕಳು ಕೊರೊನಾಗೆ ಬಲಿಯಾಗದಿರುವುದು ನಿರಾತಂಕದ ವಿಚಾರ. 2020ರ ಮಾರ್ಚ್ನಿಂದ 2021 ಮೇವರೆಗೆ ಒಟ್ಟು 285 ಮಂದಿ ಕೊರೊನಾ ತಗುಲಿ ಕೊನೆಯುಸಿರೆಳೆದಿದ್ದಾರೆ. ಇದೀಗ ಮಕ್ಕಳಿಗೂ ಸೋಂಕು ತಗುಲುತ್ತಿದ್ದು, ಪೂರಕ ಚಿಕಿತ್ಸೆ ನೀಡುವಲ್ಲಿ ಜಿಲ್ಲಾಡಳಿತ ಗಮನ ಹರಿಸಿದೆ.
ಇದನ್ನೂ ಓದಿ: ಕೊರೊನಾ ಎರಡನೇ ಅಲೆ: ತುಮಕೂರಿನಲ್ಲಿ 135ಕ್ಕೂ ಅಧಿಕ ಮಕ್ಕಳಿಗೆ ತಗುಲಿದ ಮಹಾಮಾರಿ!