ಯಾದಗಿರಿ: ಮಸ್ಕಿ ವಿಧಾನಸಭೆ ಉಪ ಚುನಾವಣಾ ಬಿಜೆಪಿ ಉಸ್ತುವಾರಿ, ಯಾದಗಿರಿ ಜಿಲ್ಲೆಯ ಸುರಪುರ ಕ್ಷೇತ್ರದ ಶಾಸಕ ರಾಜುಗೌಡಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಆಸ್ಪತ್ರೆಯಿಂದಲೇ ರಾಜುಗೌಡ ತಮ್ಮ ಬೆಂಬಲಿಗರು ಯಾವುದೇ ರೀತಿಯ ಆತಂಕ ಪಡಬಾರದು ಎಂದು ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದಾರೆ.
ವೈದ್ಯರ ಸಲಹೆ ಮೇರೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆ ಪಡೆಯುತ್ತಿರುವ ಶಾಸಕ ರಾಜುಗೌಡ, ನಿನ್ನೆ ನನಗೆ ಕೊರೊನಾ ದೃಢಪಟ್ಟಿದ್ದು, ಆಸ್ಪತ್ರೆಗೆ ದಾಖಲಾಗಿದ್ದೇನೆ. ಮೈನರ್ ಕೋವಿಡ್ ಲಕ್ಷಣ ಇದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಯಾರೂ ಕೂಡ ಆತಂಕಕ್ಕೆ ಒಳಗಾಗಬಾರದು ಎಂದು ವಿಡಿಯೋ ಮೂಲಕ ಸಂದೇಶ ಕಳುಹಿಸಿದ್ದಾರೆ.
ಅದಲ್ಲದೇ, ಆಸ್ಪತ್ರೆಯಿಂದಲೇ ತಮ್ಮ ಅಭಿಮಾನಿಗಳಿಗೆ ಅಂಬೇಡ್ಕರ್ ಅವರ 130ನೇ ಜಯಂತಿಯ ಶುಭಾಶಯ ತಿಳಿಸಿದ್ದಾರೆ. ನಿಮ್ಮ ಆಶೀರ್ವಾದದಿಂದ ಆದಷ್ಟು ಬೇಗ ಗುಣಮುಖನಾಗಿ ಜನರ ಸೇವೆಗೆ ಹಾಜರಾಗುವೆ. ಕಳೆದ ನಾಲ್ಕೈದು ದಿನಗಳಿಂದ ನನ್ನ ಜೊತೆ ಸಂಪರ್ಕ ಹೊಂದಿದವರಿಗೆ ಕೋವಿಡ್ ಲಕ್ಷಣಗಳು ಕಂಡು ಬಂದರೆ ಟೆಸ್ಟ್ ಮಾಡಿಸಿಕೊಳ್ಳುವ ಮೂಲಕ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
ಶಾಸಕ ರಾಜುಗೌಡಗೆ ಕೋವಿಡ್ ದೃಢಪಟ್ಟಿದ್ದು, ರಾಯಚೂರಿನ ಮಸ್ಕಿಯ ಬಿಜೆಪಿ ನಾಯಕರಿಗೆ ಕೊರೊನಾ ಆತಂಕ ಶುರುವಾಗಿದೆ. ಮಸ್ಕಿ ವಿಧಾನಸಭೆ ಉಪ ಚುನಾವಣಾ ಅಭ್ಯರ್ಥಿ ಪ್ರತಾಪ್ ಗೌಡಗೆ ಸೋಂಕು ದೃಢಪಟ್ಟಿತ್ತು. ಪ್ರಚಾರಕ್ಕೆ ಆಗಮಿಸಿದ್ದ ಗೋವಿಂದ ಕಾರಜೋಳ ಅವರಿಗೂ ಕೋವಿಡ್ ಅಂಟಿತ್ತು. ಮಸ್ಕಿ ಚುನಾವಣಾ ಪ್ರಚಾರಾರ್ಥವಾಗಿ ಅಬ್ಬರದ ಪ್ರಚಾರ ನಡೆಸಿದ್ದ ಶಾಸಕ ರಾಜುಗೌಡಗೆ ಸೋಂಕು ದೃಢಪಟ್ಟಿರುವುದರಿಂದ ಬಿಜೆಪಿ ಪಕ್ಷದಲ್ಲಿ ಆತಂಕ ಹೆಚ್ಚಾದಂತಾಗಿದೆ.