ಕೊಪ್ಪಳ: ಕೃಷಿ ಇಲಾಖೆಯಲ್ಲಿ ರೈತ ಮಿತ್ರರನ್ನಾಗಿ ನೇಮಿಸಿಕೊಳ್ಳುವಂತೆ ರೈತ ಅನುವುಗಾರರು ಕೃಷಿ ಇಲಾಖೆ ಜಂಟಿ ನಿರ್ದೇಶಕರು ಹಾಗೂ ತಹಶಿಲ್ದಾರ್ರ ಮೂಲಕ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
2008ರಿಂದ ರೈತ ಮತ್ತು ಕೃಷಿ ಇಲಾಖೆಯ ಕೊಂಡಿಯಾಗಿ ರೈತ ಅನುವುಗಾರರಾಗಿ ನಾವು ಕೆಲಸ ಮಾಡಿದ್ದೇವೆ. 2015ರಿಂದ ತಾಂತ್ರಿಕ ಉತ್ತೇಜಕರೆಂದು ಕೆಲಸ ಮಾಡಿದ್ದೇವೆ. ಈಗ ನಮ್ಮ ಬದಲಿಗೆ ಕೃಷಿ ಮಿತ್ರರೆಂದು ಬೇರೆಯವರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಸುಮಾರು 12 ವರ್ಷದಿಂದ ಇಕ್ರೀಸ್ಯಾಟ್ ಮತ್ತು ಇಲಾಖೆಯ ಸಹಯೋಗದೊಂದಿಗೆ ಇಳುವರಿ ಹೆಚ್ಚಳ, ರೈತರಿಗೆ ಲಘ ಪೋಷಕಾಂಶಗಳು ಕುರಿತು ಮಾಹಿತಿ, ರೈತ ಕ್ಷೇತ್ರ ಪಾಠಶಾಲೆ, ಮಣ್ಣು ಪರೀಕ್ಷೆ ಮತ್ತು ಮಣ್ಣಿನ ಆರೋಗ್ಯ ಕಾರ್ಡ್ಗಳ ಮಾಹಿತಿ ಸೇರಿದಂತೆ ಇಲಾಖೆಯ ಯೋಜನೆಯನ್ನು ರೈತರಿಗೆ ತಲುಪಿಸುವ ಕೆಲಸ ಮಾಡಿದ್ದೇವೆ.
ಆದರೂ ನಮ್ಮನ್ನು ಕೈಬಿಟ್ಟು ಬೇರೆ ಆಯ್ಕೆ ಮಾಡುವ ಚಿಂತನೆಯನ್ನು ಸರ್ಕಾರ ಮಾಡುತ್ತಿರುವುದರಿಂದ ನಮಗೆ ಅನ್ಯಾಯವಾಗುತ್ತದೆ. ನಮ್ಮನ್ನು ರೈತ ಮಿತ್ರ ಎಂದು ಪ್ರತಿ ಗ್ರಾಮ ಪಂಚಾಯತಿಗೆ ಒಬ್ಬರಂತೆ ನೇಮಕ ಮಾಡಿಕೊಂಡು ತಿಂಗಳಿಗೆ ಕನಿಷ್ಠ 10 ಸಾವಿರ ರೂ. ವೇತನ ನೀಡಬೇಕು ಎಂದು ರೈತ ಅನುವುಗಾರರು ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿ ಆಗ್ರಹಿಸಿದ್ದಾರೆ.