ಬೆಂಗಳೂರು : ಐಎಎಸ್ ಮತ್ತು ಐಪಿಎಸ್ ಸೇರಿದಂತೆ ನಾಗರಿಕ ಸೇವಕರ (ಸಿವಿಲ್ ಸರ್ವೆಂಟ್ಸ್) ವರ್ಗಾವಣೆ ವಿಚಾರದಲ್ಲಿ ಕನಿಷ್ಠ ಸೇವಾವಧಿ ನಿಗದಿಪಡಿಸುವ ಮತ್ತು ಅದಕ್ಕಾಗಿ ಕೇಂದ್ರ ನಾಗರಿಕ ಸೇವಾ ಮಂಡಳಿ ರಚಿಸುವ ಸಂಬಂಧ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಈ ಕುರಿತು ವಕೀಲೆ ಸುಧಾ ಕಾಟ್ವಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಕೆಲ ಕಾಲ ಅರ್ಜಿದಾರರ ಪರ ವಕೀಲ ಎಸ್. ಉಮಾಪತಿ ವಾದ ಆಲಿಸಿದ ಪೀಠ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಿತು. ಹಾಗೆಯೇ, ಸುಪ್ರೀಂಕೋರ್ಟ್ ಆದೇಶದ ಹೊರತಾಗಿಯೂ ಈವರೆಗೂ ಏಕೆ ಕೇಂದ್ರ ನಾಗರಿಕ ಸೇವಾ ಮಂಡಳಿ ರಚಿಸಿಲ್ಲ ಎಂಬ ಬಗ್ಗೆ ವಿವರಣೆ ನೀಡಿ ಪ್ರಮಾಣ ಪತ್ರ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿ ವಿಚಾರಣೆ ಮುಂದೂಡಿತು.
ಅರ್ಜಿದಾರರ ಕೋರಿಕೆ :
ಐಎಎಸ್, ಐಪಿಎಸ್ ಸೇರಿದಂತೆ ನಾಗರಿಕ ಸೇವೆಯಲ್ಲಿರುವ ಅಧಿಕಾರಿಗಳು ದಕ್ಷವಾಗಿ ಹಾಗೂ ನಿರ್ಭೀತಿಯಿಂದ ಕರ್ತವ್ಯ ನಿರ್ವಹಿಸಬೇಕು. ಆದರೆ, ಪದೇ ಪದೆ ವರ್ಗವಣೆ ಮಾಡಿದಾಗ ಅವರ ದಕ್ಷತೆ ಕುಗ್ಗುತ್ತದೆ. ವರ್ಗಾವಣೆಗೆ ಕನಿಷ್ಠ ಅವಧಿ ನಿಗದಿ ಮಾಡದ ಕಾರಣ ರಾಜಕಾರಣಿಗಳು ತಮ್ಮಿಷ್ಟದಂತೆ ಅಧಿಕಾರಿಗಳನ್ನು ವರ್ಗಾವಣೆ ಮಾಡುವುದು ಸಾಮಾನ್ಯವಾಗಿದ್ದು, ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಡುತ್ತಿದೆ. ನಾಗರಿಕ ಸೇವೆಯಲ್ಲಿರುವ ಅಧಿಕಾರಿಗಳು ನಿರ್ಭೀತಿ ಮತ್ತು ಮುಕ್ತವಾಗಿ ಕೆಲಸ ಮಾಡಲು ಆಗುವುದಿಲ್ಲ.
ಸುಪ್ರೀಂಕೋರ್ಟ್ 2013ರ ಅ.30ರಂದು ಎಲ್ಲಾ ಕೇಂದ್ರಾಡಳಿತ ಪ್ರದೇಶ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿ, ನಾಗರಿಕ ಸೇವೆಯಲ್ಲಿರುವ ಅಧಿಕಾರಿಗಳನ್ನು ಪದೇ ಪದೆ ವರ್ಗಾವಣೆ ಮಾಡುವುದನ್ನು ತಡೆಯಲು ಮೂರು ತಿಂಗಳ ಒಳಗೆ ಕನಿಷ್ಠ ಸೇವಾವಧಿ ನೀತಿ ರೂಪಿಸಿ ಜಾರಿಗೊಳಿಸಬೇಕು. ಅದಕ್ಕಾಗಿ ಕೇಂದ್ರ ನಾಗರಿಕ ಸೇವಾ ಮಂಡಳಿ ರಚಿಸಬೇಕು ಎಂದು ಆದೇಶಿಸಿತ್ತು.
ಆದರೆ, ರಾಜ್ಯ ಸರ್ಕಾರ ಈವರೆಗೆ ಆದೇಶ ಪಾಲನೆ ಮಾಡಿಲ್ಲ. ಆದ್ದರಿಂದ ಕನಿಷ್ಠ ಸೇವಾವಧಿ ನೀತಿ ರೂಪಿಸಿ ಜಾರಿಗೆ ತರಬೇಕು ಮತ್ತು ಕೇಂದ್ರ ನಾಗರಿಕ ಸೇವಾ ಮಂಡಳಿ ರಚಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.