ಬೆಂಗಳೂರು: ಮೈಸೂರು ಮೇಯರ್ ಚುನಾವಣೆ ವಿಚಾರದಲ್ಲಿ ಈ ಹಿಂದೆ ಒಪ್ಪಂದ ಆಗಿತ್ತು, ಆದರೆ ಅದನ್ನು ಜೆಡಿಎಸ್ ಮರೆತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಜೆಡಿಎಸ್ ಮೂರು ವರ್ಷ, ಕಾಂಗ್ರೆಸ್ ಎರಡು ವರ್ಷ ಎಂಬ ಒಪ್ಪಂದ ಆಗಿತ್ತು. ಆ ಒಪ್ಪಂದಕ್ಕೆ ಬದ್ಧರಾಗಿರ್ತಾರೆ ಅಂದ್ಕೊಂಡು ಇದ್ವಿ. ಆದರೆ ಜೆಡಿಎಸ್ ಮಾತು ಉಳಿಸಿಕೊಂಡಿಲ್ಲ ಎಂದರು.
ಸಿದ್ದರಾಮಯ್ಯ ನೇರ ಕಾರಣ ಎಂಬ ಹೆಚ್ಡಿಕೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಆ ಬಗ್ಗೆ ನನಗೆ ಗೊತ್ತಿಲ್ಲ, ನಾನೇನೂ ಮಾತಾಡಲ್ಲ, ಈ ಬಗ್ಗೆ ತಿಳಿದುಕೊಳ್ತೀನಿ ಎಂದರು. ಡಿಕೆಶಿ ನನ್ನ ಜೊತೆ ಮಾತಾಡದಂತೆ ಸಿದ್ದರಾಮಯ್ಯ ಒತ್ತಡ ಹಾಕಿದ್ದಾರೆ ಎಂಬ ಹೆಚ್ಡಿಕೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಹಾಗೇನಿಲ್ಲ, ನಾನು ಎಲ್ಲರ ಜೊತೆಯೂ ಮಾತಾಡ್ತೀನಿ. ಪಕ್ಷಕ್ಕಾಗಿ ನಾನು ಎಲ್ಲರ ಜೊತೆ ಮಾತಾಡ್ತೀನಿ, ಯಾರೂ ಮಾತಾಡಬೇಡ ಅಂತ ಹೇಳಿಲ್ಲ ಎಂದರು.
ನಾಳೆ ಶರತ್ ಬಚ್ಚೇಗೌಡ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಹ ಸದಸ್ಯತ್ವ ಪಡೆದುಕೊಳ್ಳುತ್ತಾರೆ. ಪಕ್ಷೇತರ ಅಭ್ಯರ್ಥಿ ಕಾಂಗ್ರೆಸ್ ಸೇರ್ಪಡೆ ಆಗಲು ಕೆಲ ಕಾನೂನಿನ ತೊಂದರೆಗಳು ಇವೆ. ಹೀಗಾಗಿ ಕಾಂಗ್ರೆಸ್ ಸಹ ಸದಸ್ಯತ್ವ ಪಡೆದುಕೊಳ್ಳುತ್ತಿದ್ದಾರೆ ಎಂದರು.
ಸೋತ ಕ್ಷೇತ್ರಗಳಲ್ಲಿ ಎರಡು ಕಿಮೀ ಪಾದಯಾತ್ರೆ ವಿಚಾರ ಮಾತನಾಡಿ, ಈ ಸಂಬಂಧ ಇನ್ನೂ ನಾಳೆ ಸಭೆ ಮಾಡಬೇಕಿದೆ. ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡುತ್ತೇನೆ ಎಂದರು.