ಬೆಂಗಳೂರು: ಕೊರೊನಾ ಸೋಂಕು ದೃಢಪಟ್ಟಿದ್ದ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಗುಣಮುಖರಾಗಿದ್ದು, ಕೋವಿಡ್ ವರದಿ ನೆಗೆಟಿವ್ ಬಂದ ಹಿನ್ನೆಲೆ ವರ್ಕ್ ಫ್ರಮ್ ಹೋಂ ಮೂಲಕ ಕರ್ತವ್ಯಕ್ಕೆ ಮರಳಿದ್ದಾರೆ.
ಕೊರೊನಾದಿಂದ ಗುಣಮುಖರಾದ ಮಾಹಿತಿಯನ್ನು ಟ್ವಿಟರ್ ಮೂಲಕ ಹಂಚಿಕೊಂಡಿರುವ ಡಿಸಿಎಂ ಕಾರಜೋಳ, ತಮ್ಮೆಲ್ಲರ ಶುಭ ಹಾರೈಕೆ ಹಾಗೂ ಭಗವಂತನ ಕೃಪೆಯಿಂದ ನಾನು ಗುಣಮುಖನಾಗಿದ್ದು, ನನಗೆ ಚಿಕಿತ್ಸೆ ನೀಡಿದ ವೈದ್ಯರು ಹಾಗೂ ಮಗಳ ರೂಪದಲ್ಲಿ ಆರೈಕೆ ಮಾಡಿದ ಸ್ಟಾಫ್ ನರ್ಸ್ಗಳಿಗೆ ಅಭಾರಿಯಾಗಿದ್ದೇನೆ. ಜೊತೆಗೆ ಶೀಘ್ರ ಗುಣಮುಖರಾಗುವಂತೆ ಶುಭ ಹಾರೈಸಿದ ತಮ್ಮೆಲ್ಲರಿಗೂ ಅನಂತ ಧನ್ಯವಾದಗಳು ಎಂದು ಡಿಸಿಎಂ ಕೃತಜ್ಞತೆ ಸಲ್ಲಿಸಿದ್ದಾರೆ.
ವೈದ್ಯರ ಸಲಹೆ ಮೇರೆಗೆ ನಾನು ಹೋಂ ಕ್ವಾರಂಟೈನ್ನಲ್ಲಿದ್ದು, ಮನೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಇಲಾಖೆಗಳ ಕಾರ್ಯ ಚಟುವಟಿಕೆಗಳನ್ನು ಸುಗಮವಾಗಿ ಎಂದಿನಂತೆ ನಿರ್ವಹಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಸೆಪ್ಟೆಂಬರ್ 23ರಂದು ಡಿಸಿಎಂ ಗೋವಿಂದ ಕಾರಜೋಳಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿತ್ತು. ಯಾವುದೇ ರೋಗ ಲಕ್ಷಣಗಳು ಇಲ್ಲದಿದ್ದರೂ ಸಹ ವೈದ್ಯರ ಸಲಹೆ ಮೇರೆಗೆ ಹೋಂ ಐಸೋಲೇಷನ್ನಲ್ಲಿದ್ದು, 14 ದಿನಗಳಲ್ಲಿ ಕೊರೊನಾದಿಂದ ಗುಣಮುಖರಾಗಿದ್ದಾರೆ.