ಚಿಕ್ಕೋಡಿ: ಚಿಕ್ಕೋಡಿ ಕ್ಷೇತ್ರದ ಚುನಾವಣೆ ಕಣ ರಂಗೇರಿದೆ. ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಗಳಲ್ಲಿ 7 ಬಾರಿ ಗೆದ್ದಿರುವ ಪ್ರಕಾಶ್ ಹುಕ್ಕೇರಿ ಮತ್ತೊಮ್ಮೆ ಕಾಂಗ್ರೆಸ್‍ನಿಂದ ಕಣಕ್ಕಿಳಿದಿದ್ದಾರೆ. ಉದ್ಯಮಿ ಅಣ್ಣಾ ಸಾಹೇಬ್ ಜೊಲ್ಲೆ ಬಿಜೆಪಿಯ ಹುರಿಯಾಳು ಆಗಿ ಅಖಾಡಕ್ಕಿಳಿದಿದ್ದಾರೆ.
ಪಕ್ಷಗಳಿಗಿಂತ ಅಭ್ಯರ್ಥಿಯ ವೈಯಕ್ತಿಕ ವರ್ಚಸ್ಸೇ ಹೆಚ್ಚು ಸದ್ದು ಮಾಡುವುದು ಚಿಕ್ಕೋಡಿ ಕ್ಷೇತ್ರದ ವಿಶೇಷತೆ. ಕಳೆದ ಬಾರಿ ದೇಶಾದ್ಯಂತ ಮೋದಿ ಅಲೆ ಇದ್ದರೂ ಬಿಜೆಪಿ ಅಭ್ಯರ್ಥಿ ರಮೇಶ್ ಕತ್ತಿ ವಿರುದ್ಧ ಪ್ರಕಾಶ್ ಹುಕ್ಕೇರಿ ಜಯ ಗಳಿಸಿದ್ದೇ ಇದಕ್ಕೆ ನಿದರ್ಶನ. ಕಣದಲ್ಲಿರುವ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳಿಬ್ಬರೂ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಗ್ರಾಮದವರು ಎಂಬುದು ಮತ್ತೊಂದು ವಿಶೇಷ. ಪ್ರಕಾಶ್ ಹುಕ್ಕೇರಿ ಪುತ್ರ ಶಾಸಕರಾಗಿದ್ದು, ಬಿಜೆಪಿಯ ಅಣ್ಣಾಸಾಹೇಬ್ ಜೊಲ್ಲೆ ಪತ್ನಿ ಶಶಿಕಲಾ ಕೂಡ ಶಾಸಕಿ ಆಗಿದ್ದಾರೆ. ರಾಜಕೀಯ ಹಿನ್ನೆಲೆ ಹೊಂದಿರುವ ಕುಟುಂಬಗಳ ಅಭ್ಯರ್ಥಿಗಳ ನಡುವಿನ ಸೆಣಸಾಟಕ್ಕೆ ಈ ಚುನಾವಣೆ ಸಾಕ್ಷಿಯಾಗಲಿದೆ.
ಬಿಜೆಪಿಯ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ರಮೇಶ್ ಕತ್ತಿ ಹಿಂದಿಕ್ಕಿ ಅಚ್ಚರಿಯ ರೀತಿಯಲ್ಲಿ ಅಣ್ಣಾಸಾಹೇಬ್ ಜೊಲ್ಲೆ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಹೀಗಾಗಿ ಜಿಲ್ಲೆಯ ಹಿರಿಯ ಕಾಂಗ್ರೆಸ್ ನಾಯಕ ಪ್ರಕಾಶ್ ಹುಕ್ಕೇರಿಯನ್ನು ಕಟ್ಟಿಹಾಕುವುದು, ಕತ್ತಿ ಸಹೋದರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದೇ ಬಿಜೆಪಿ ಅಭ್ಯರ್ಥಿ ಜೊಲ್ಲೆಗೆ ಸವಾಲಾಗಿ ಪರಿಣಮಿಸಿದೆ.
ಅಂದು ಪುತ್ರ, ಇಂದು ತಂದೆ ವಿರುದ್ಧ ಕಾದಾಟ!
ಜಿಲ್ಲೆಯಲ್ಲಿ ಉದ್ಯಮಿ ಆಗಿ ಗುರುತಿಸಿಕೊಂಡಿರುವ ಅಣ್ಣಾಸಾಹೇಬ್ ಜೊಲ್ಲೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪ್ರಕಾಶ್ ಹುಕ್ಕೇರಿ ಪುತ್ರ ಗಣೇಶ್ ಹುಕ್ಕೇರಿ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಸೋಲನುಭವಿಸಿದ್ದರು. ಈಗ ಪ್ರಕಾಶ್ ಹುಕ್ಕೇರಿ ವಿರುದ್ಧ ಕಣಕ್ಕಿಳಿದಿದ್ದಾರೆ.
ಕಬ್ಬು ಬೆಳೆಗಾರರ ಸಮಸ್ಯೆ..
ಜಿಲ್ಲೆಯಲ್ಲಿ ಕಬ್ಬು ಬೆಳೆಗಾರರ ಸಮಸ್ಯೆ ಸಾಕಷ್ಟಿವೆ. ದರ ನಿಗದಿ ಹಾಗೂ ನಿಗದಿತ ಸಮಯದಲ್ಲಿ ಬಾಕಿ ಬಿಲ್ ಸಿಗದೇ ರೈತರು ಸಮಸ್ಯೆ ಎದುರಿಸುವಂತಾಗಿದೆ. ಜಿಲ್ಲೆಯ ಬಹುತೇಕ ರಾಜಕೀಯ ನಾಯಕರ ಒಡೆತನದಲ್ಲೇ ಸಕ್ಕರೆ ಕಾರ್ಖಾನೆಗಳಿವೆ. ನಿಗದಿತ ಸಮಯದಲ್ಲಿ ಕಬ್ಬಿನ ಬಿಲ್ ಕೊಡದೇ ಮಾಲೀಕರು ರೈತರನ್ನು ಸತಾಯಿಸುತ್ತಿದ್ದಾರೆ. ಹಲವು ವರ್ಷಗಳಿಂದ ಕಬ್ಬಿನ ಹಣ ಬಾಕಿ ಇದ್ದು, ಮಾಲೀಕರು ಹಣ ಬಿಡುಗಡೆ ಮಾಡಿಲ್ಲ. ಕೃಷ್ಣಾ ನದಿ ತೀರದ ನಿವಾಸಿಗಳು ಪ್ರತಿವರ್ಷ ನೆರೆ ಸಮಸ್ಯೆ ಅನುಭವಿಸಿದ್ರೆ, ಇನ್ನೂ ಕೆಲ ಪ್ರದೇಶಗಳು ಅನಾವೃಷ್ಠಿ ಎದುರಿಸುತ್ತಿವೆ. ಸಮೀಪದಲ್ಲಿ ನದಿಗಳಿದ್ದು, ಸಮಗ್ರ ನೀರಾವರಿಗೆ ಯೋಜನೆ ರೂಪಿಸಬೇಕಿದೆ.
ಚಿಕ್ಕೋಡಿ ಕ್ಷೇತ್ರದಿಂದ ಈ ಹಿಂದೆ ಬಿ.ಶಂಕರಾನಂದ ಕಾಂಗ್ರೆಸ್‍ನಿಂದ 7 ಸಲ ಸ್ಪರ್ಧಿಸಿ ಗೆಲುವು ದಾಖಲಿಸಿದ್ದರು. ಅಲ್ಲದೇ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹಾಗೂ ನರಸಿಂಹರಾವ್ ಸರ್ಕಾರದಲ್ಲಿ ವಿವಿಧ ಇಲಾಖೆಗಳ ಸಚಿವರಾಗಿಯೂ ಕೆಲಸ ಮಾಡಿದ್ದಾರೆ. ಕಾಂಗ್ರೆಸ್‍ನ ಭದ್ರಕೋಟೆಯಾಗಿದ್ದ ಚಿಕ್ಕೋಡಿ ಕ್ಷೇತ್ರದಲ್ಲಿ ವಿಜಯಪುರದಿಂದ ವಲಸೆ ಬಂದ ರಮೇಶ್ ಜಿಗಜಿಣಗಿ 3 ಸಲ ಸ್ಪರ್ಧಿಸಿದ್ದರು. ತನ್ನದಲ್ಲದ ಊರಿನಲ್ಲಿ ಹ್ಯಾಟ್ರಿಕ್ ಗೆಲುವು ದಾಖಲಿಸಿದ್ದು ಕೂಡ ಜಿಗಜಿಣಗಿ ಅವರ ಸಾಧನೆ. ಚಿಕ್ಕೋಡಿ ಸಾಮಾನ್ಯ ಕ್ಷೇತ್ರವಾದ ಬಳಿಕ ಬಿಜೆಪಿಯಿಂದ ಸ್ಪರ್ಧಿಸಿದ್ದ ರಮೇಶ್ ಕತ್ತಿ ಒಂದು ಬಾರಿ ಗೆಲುವು ದಾಖಲಿಸಿದ್ದರು. ಅದಾದ ಬಳಿಕ ಈಗ ಪ್ರಕಾಶ್ ಹುಕ್ಕೇರಿ 2 ನೇ ಬಾರಿಗೆ ಅಖಾಡಕ್ಕಿಳಿದಿದ್ದಾರೆ.
1971 ರಿಂದ 2014 ರ ವರೆಗೆ ಚಿಕ್ಕೋಡಿ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದವರು:
- ಮೈಸೂರು ರಾಜ್ಯ:
- 1971: ಬಿ. ಶಂಕರಾನಂದ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- ಕರ್ನಾಟಕ :
- 1977: ಬಿ. ಶಂಕರಾನಂದ- ಕಾಂಗ್ರೆಸ್
- 1980: ಬಿ. ಶಂಕರಾನಂದ- ಕಾಂಗ್ರೆಸ್
- 1984: ಬಿ. ಶಂಕರಾನಂದ- ಕಾಂಗ್ರೆಸ್
- 1989: ಬಿ. ಶಂಕರಾನಂದ -ಕಾಂಗ್ರೆಸ್
- 1991: ಬಿ. ಶಂಕರಾನಂದ- ಕಾಂಗ್ರೆಸ್
- 1996: ರತ್ನಮಾಲ ಧಾರೇಶ್ವರ ಸವಣೂರು- ಜನತಾ ದಳ
- 1998: ಜಿಗಜಿಣಗಿ ರಮೇಶ್ ಚಂದ್ರಪ್ಪ- ಲೋಕ ಶಕ್ತಿ
- 1999: ಜಿಗಜಿಣಗಿ ರಮೇಶ್ ಚಂದ್ರಪ್ಪ - ಜನತಾ ದಳ (ಸಂಯುಕ್ತ)
- 2004: ಜಿಗಜಿಣಗಿ ರಮೇಶ್ ಚಂದ್ರಪ್ಪ -ಬಿಜೆಪಿ
- 2009: ವಿ. ರಮೇಶ್ ಕತ್ತಿ- ಬಿಜೆಪಿ
- 2014: ಪ್ರಕಾಶ್ ಹುಕ್ಕೇರಿ- ಕಾಂಗ್ರೆಸ್
ಕಳೆದ 2014 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ಕತ್ತಿ 3,003 ಮತಗಳಿಂದ ಸೋಲು ಕಂಡಿದ್ದರು. ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ 4,71,370 ಮತಗಳನ್ನು ಪಡೆದಿದ್ದರು. ಬಿಜೆಪಿ ಅಭ್ಯರ್ಥಿ ರಮೇಶ್ ಕತ್ತಿ 4,74,343 ಮತಗಳನ್ನು ಪಡೆದಿದ್ದರು. ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದಲ್ಲಿ ಒಟ್ಟು 8 ವಿಧಾನಸಭಾ ಮತಕ್ಷೇತ್ರಗಳು ಬರುತ್ತವೆ. ಅದರಲ್ಲಿ 4 ಬಿಜೆಪಿ ಗೆದ್ದರೆ 4 ಕಾಂಗ್ರೆಸ್ ಗೆದ್ದಿದೆ.
![hikkodi_lokasaba](https://etvbharatimages.akamaized.net/etvbharat/images/kn_ckd_8419_chikkodi_abyartigalu_sanjay2_pho2_0804digital_01239_244.jpg)
ಬಿಜೆಪಿ ಗೆದ್ದ ವಿಧಾನಸಭಾ ಮತಕ್ಷೇತ್ರಗಳು :
- ನಿಪ್ಪಾಣಿ - ಶಶಿಕಲಾ ಜೊಲ್ಲೆ
- ಕುಡಚಿ - ಪಿ.ರಾಜೀವ್
- ರಾಯಬಾಗ - ದುರ್ಯೋಧನ ಐಹೊಳೆ
- ಹುಕ್ಕೇರಿ - ಉಮೇಶ್ ಕತ್ತಿ
ಕಾಂಗ್ರೆಸ್ ಪಕ್ಷ ಗೆದ್ದ ವಿಧಾನಸಭಾ ಮತಕ್ಷೇತ್ರಗಳು :
- ಚಿಕ್ಕೋಡಿ - ಸದಲಗಾ - ಗಣೇಶ್ ಹುಕ್ಕೇರಿ
- ಯಮಕನಮರಡಿ - ಸತೀಶ್ ಜಾರಕಿಹೊಳಿ
- ಅಥಣಿ - ಮಹೇಶ್ ಕುಮಠಳ್ಳಿ
- ಕಾಗವಾಡ - ಶ್ರೀಮಂತ ಪಾಟೀಲ್
ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಮತದಾರರ ವಿವರ :
- ಪುರುಷರು - 8,06,052
- ಮಹಿಳೆಯರು - 7,73,202
- ತೃತೀಯ ಲಿಂಗಿಗಳು - 55
- ಒಟ್ಟು ಮತದಾರರು - 15,79,309
ಈ ಬಾರಿ ಕ್ಷೇತ್ರದಲ್ಲಿ 26,356 ಮತದಾರರು ಹೊಸದಾಗಿ ಮತ ಚಲಾಯಿಸಲಿದ್ದಾರೆ.