ಬೆಂಗಳೂರು: ಬೆಳಗಾವಿಯ ಪೀರನವಾಡಿಯಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಎಡಿಜಿಪಿ ನೇತೃತ್ವದ ಅಧಿಕಾರಿಗಳ ತಂಡವನ್ನು ಕಳುಹಿಸಿಕೊಡಲಾಗುತ್ತದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಉಸ್ತುವಾರಿ ಸಚಿವರು ಈಗಾಗಲೇ ಸಭೆ ಮಾಡಿದ್ದಾರೆ. ಸೌಹಾರ್ದಯುತವಾಗಿ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ತೀರ್ಮಾನ ಕೈಗೊಳ್ಳಲಾಗಿದೆ. ಇಂದು ಬೆಳಗ್ಗೆ ಗದ್ದಲದ ವಾತಾವರಣ ಸೃಷ್ಟಿಯಾಗಿದ್ದ ಕಾರಣ ಅನಿವಾರ್ಯವಾಗಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಈ ಸಂಬಂಧ ಬೆಳಗಾವಿ ಪೊಲೀಸರ ಜೊತೆ ಮಾತುಕತೆ ನಡೆಸುತ್ತೇನೆ ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಎರಡು ಗುಂಪಿನ ಮುಖಂಡರ ಸಭೆ ಮಾಡಿ ಸೌಹಾರ್ದಯುತವಾಗಿ ಈ ಸಮಸ್ಯೆಯನ್ನು ಬಗೆಹರಿಸಬೇಕು. ಸಂಗೊಳ್ಳಿ ರಾಯಣ್ಣ ಹಾಗೂ ಶಿವಾಜಿ ಮಹಾರಾಜ್ ಇಬ್ಬರೂ ದೇಶ ಭಕ್ತರು. ದೇಶ ಭಕ್ತರ ಗೌರವ ಕಾಪಾಡುವ ಕೆಲಸ ಮಾಡುವುದು ನಮ್ಮೆಲ್ಲರ ಕರ್ತವ್ಯ. ಈ ಹಿನ್ನೆಲೆಯಲ್ಲಿ ಇಂದು ಎರಡೂ ಕಡೆಯ ಮುಖಂಡರ ಸಭೆಯನ್ನು ಸೌಹಾರ್ದಯುತವಾಗಿ ನಡೆಸಿ ಸಮಸ್ಯೆಯನ್ನು ಪರಿಹರಿಸುವ ಕೆಲಸ ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರ ನೇತೃತ್ವದಲ್ಲಿ ನಡೆಸಲಿದೆ. ಸಮಸ್ಯೆ ಪರಿಹಾರವಾಗಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.