ಮೈಸೂರು: ಮಂಡ್ಯ ಲೋಕಸಭಾ ಚುನಾವಣಾ ಕ್ಷೇತ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಇಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರವಾಗಿ ನಟ ದರ್ಶನ್ ರಣಕಹಳೆ ಊದುವ ಮೂಲಕ ಅಖಾಡಕ್ಕಿಳಿದರು.
ಶ್ರೀರಂಗಪಟ್ಟಣದ ಬೆಳಗೊಳ ಹೋಬಳಿಯ ಸಂತೆಮಾಳದ ಅರಳಿಕಟ್ಟೆ ವೃತ್ತದಿಂದ ಪ್ರಚಾರಕ್ಕೆ ಚಾಲನೆ ನೀಡುವ ಮೂಲಕ ಸುಮಲತಾ ಅಂಬರೀಶ್ ಪರವಾಗಿ ಮತಯಾಚನೆ ಮಾಡಿದರು.
ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಯಾರ್ಯಾರೋ ಏನೇನೋ ಮಾತಾಡ್ತಿದಾರೆ, ಅದೆಕ್ಕೆಲ್ಲ ನಾನು ಬೇಸರ ಮಾಡ್ಕೊಳ್ಳಲ್ಲ. ಏ.18ರಂದು ಅವರ ಮಾತುಗಳಿಗೆ ಮತದಾರರೇ ಸೂಕ್ತ ಉತ್ತರ ನೀಡುತ್ತಾರೆ. ಅಂಬರೀಶ್ ಅವರು ಮೂರು ಬಾರಿ ಶಾಸಕರಾಗಿದ್ದವರು. ಎರಡು ಬಾರಿ ಲೋಕಸಭಾ ಸದಸ್ಯರಾಗಿದ್ದವರು. ಕಾವೇರಿ ಗಲಾಟೆ ಶುರುವಾದಾಗ ರಾಜೀನಾಮೆ ಕೊಟ್ಟು ಕಾವೇರಿ ಹೋರಾಟಕ್ಕೆ ಬೆಂಬಲ ನೀಡಿದರು. ಸುಮಲತಾ ಅಂಬರೀಶ್ ಅವರ ಕ್ರಮಸಂಖ್ಯೆ 20ಕ್ಕೆ ಮತ ನೀಡಿ ಎಂದು ಜಿಲ್ಲೆಯ ಜನರಲ್ಲಿ ಮನವಿ ಮಾಡಿದರು.
ಇನ್ನು ನಟ ದರ್ಶನ್ ಅವರು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರವಾಗಿ ಪ್ರಚಾರಕ್ಕೆ ಬಂದಿದ್ದಾರೆ ಎಂಬ ಸುದ್ದಿ ತಿಳಿದು ಓಡೋಡಿ ನೂರಾರು ಅಭಿಮಾನಿಗಳು, ಡಿ ಬಾಸ್.. ಡಿ ಬಾಸ್.. ಎಂದು ಕೂಗುತ್ತಾ ಜೈ ಕಾರ ಹಾಕಿದರು. ಅಭಿಮಾನಿಗಳ ಸಂತಸ ನೋಡಿದ ಡಿ ಬಾಸ್ ದರ್ಶನ್, ಸುಮಲತಾ ಅಮ್ಮನನ್ನು ಗೆಲ್ಲಿಸಿಕೊಡ್ರೋ ಎಂದು ಮನವಿ ಮಾಡಿದರು.