ಬೆಂಗಳೂರು: ಕೊರೊನಾ ವಾರಿಯರ್ಸ್ ಆಗಿ ಕರ್ತವ್ಯ ನಿರ್ವಹಣೆ ಮಾಡುತ್ತಿರುವ ರಾಜ್ಯದ ಪೊಲೀಸರಿಗೂ ಕೊರೊನಾ ಸೋಂಕು ತಗುಲಿದ್ದು, ಸದ್ಯ ರಾಜ್ಯದಲ್ಲಿ ಒಟ್ಟು 165 ಮಂದಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ.
ಸದ್ಯಕ್ಕೆ ಪೊಲೀಸರು ಭಯದಲ್ಲಿ ಕರ್ತವ್ಯ ನಿರ್ವಹಣೆ ಮಾಡಬೇಕಾದ ಅನಿವಾರ್ಯತೆ ಉಂಟಾಗಿದ್ದು, 165 ಜನರಲ್ಲಿ 63 ಮಂದಿ ಬೆಂಗಳೂರಿನವರಾಗಿದ್ದು, ಒಟ್ಟು ಇಲ್ಲಿಯವರೆಗೆ 59 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಜೊತೆಗೆ ಮೂವರು ಸಾವನ್ನಪ್ಪಿದ್ದಾರೆ.
ಹೀಗಾಗಿ ಹಿರಿಯಾಧಿಕಾರಿಗಳ ಸೂಚನೆ ಮೇರೆಗೆ ಸದ್ಯ ಪೊಲೀಸ್ ಠಾಣೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೊಲೀಸರು ವಿನಾಕಾರಣ ಸಾರ್ವಜನಿಕರನ್ನು ಭೇಟಿಯಾಗುವುದು ಅಥವಾ ಠಾಣೆಗಳಲ್ಲಿ ತನಿಖೆ ನೆಪದಲ್ಲಿ ಟೈಮ್ ಪಾಸ್ ಮಾಡುವುದನ್ನು ನಿಷೇಧ ಮಾಡಲಾಗಿದೆ.
ಸಾರ್ವಜನಿಕರು ದೂರುಗಳನ್ನು ನೀಡಬೇಕಾದರೂ ಕೂಡ ಠಾಣೆಯ ಹೊರಗಡೆ ಇರುವ ಪೊಲೀಸ್ ಚೌಕಿಯಲ್ಲಿ ದೂರು ನೀಡಿ ತೆರಳಬೇಕಾಗುತ್ತದೆ. ಪೊಲೀಸರಿಗೆ ಒಂದು ವೇಳೆ ಪ್ರಕರಣ ಗಂಭೀರವೆಂದು ಅನಿಸಿದರೆ ಮಾತ್ರ ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸಲಿದ್ದಾರೆ.
ದಿನದಿಂದ ದಿನಕ್ಕೆ ಪ್ರಕರಣಗಳು ಹೆಚ್ಚಾಗುತ್ತಿದ್ದು ಬಹುತೇಕ ಠಾಣೆಗಳು ಸೀಲ್‌ಡೌನ್ ಆಗಿದೆ. ಮತ್ತೊಂದೆಡೆ ಈಗಾಗಲೇ ಕೊರೊನಾ ಪಾಸಿಟಿವ್ ಬಂದಿರುವ ಪೊಲೀಸರಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲವೆಂಬ ಆರೋಪ ಕೇಳಿಬಂದಿದೆ.