ಮೈಸೂರು: ಜನರಿಂದ ಠೇವಣಿ ಹಣ ಪಡೆದು ವಾಪಾಸ್ ನೀಡದೇ ವಂಚಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ನಗರದ ಡಿ.ಸುಬ್ಬಯ್ಯ ರಸ್ತೆಯಲ್ಲಿರುವ ವಜ್ರಗಿರಿ ಸೌಹಾರ್ದ ಮಲ್ಟಿಪರ್ಪಸ್ ಕೋ - ಆಪರೇಟಿವ್ ಲಿಮಿಟೆಡ್ ಎಂಬ ಸಂಸ್ಥೆಯು ಕಳೆದ 6 ವರ್ಷಗಳ ಹಿಂದೆ ಆರಂಭವಾಗಿತ್ತು.
ಇದು ಜನರಿಂದ ಅಧಿಕ ಬಡ್ಡಿ ನೀಡುತ್ತೇವೆ ಎಂದು ಲಕ್ಷಾಂತರ ರೂ. ಫಿಕ್ಸೆಡ್ ಡೆಪಾಸಿಟ್ ಪಡೆದು 6 ವರ್ಷಗಳ ನಂತರ ದುಪ್ಪಟ್ಟು ಹಣ ನೀಡುವುದಾಗಿ ಹೇಳಿ ಹಣ ಪಡೆದಿತ್ತು. ಜೊತೆಗೆ ತನ್ನ ಏಜೆಂಟ್ಗಳ ಮೂಲಕ ಕೆ.ಆರ್.ಪೇಟೆ, ಮಂಡ್ಯ, ಮಳವಳ್ಳಿ ಸೇರಿದಂತೆ ಅನೇಕ ಕಡೆಗಳಲ್ಲಿ ಸಾಲ ನೀಡುವುದಾಗಿ ಪಿಗ್ಮಿ ರೂಪದಲ್ಲಿ ಕೋಟ್ಯಂತರ ರೂಪಾಯಿ ಹಣ ಸಂಗ್ರಹಿಸಿ ಈಗ ಹಣ ವಾಪಾಸ್ ನೀಡಿದೆ ಸತಾಯಿಸಿದ್ದಾರೆ. ಇದರಿಂದ ಅನುಮಾನಗೊಂಡ ಜನರು ಮೈಸೂರಿನ ಕಚೇರಿಗೆ ಬಂದು ವಿಚಾರಿಸಿದಾಗ ಅಲ್ಲಿ ಯಾವುದೇ ನಿರ್ದೇಶಕರು, ಅಧ್ಯಕ್ಷರು ಇಲ್ಲ. ಕಚೇರಿ ಸಹಾಯಕರನ್ನು ಕೇಳಿದಾಗ ಅವರು ಸಹ ಸರಿಯಾಗಿ ಉತ್ತರ ನೀಡುತ್ತಿಲ್ಲ ಎಂದು ಹಣ ಕಳೆದುಕೊಂಡವರು ಆರೋಪಿಸಿದ್ದಾರೆ.
ಕಚೇರಿಯಲ್ಲಿ ಪ್ರತಿಭಟನೆ: ವಜ್ರಗಿರಿ ಸೌಹಾರ್ದ ಮಲ್ಟಿಪರ್ಪಸ್ ಕೋ-ಅಪರೇಟಿವ್ ಲಿಮಿಟೆಡ್ ನ ಕಚೇರಿಗೆ ಫಿಕ್ಸೆಡ್ ಡಿಪಾಸಿಟ್ ಹಾಕಿದ ಮಹಿಳೆಯರು ಹಾಗೂ ಕೆ.ಆರ್.ಪೇಟೆ ತಾಲೂಕಿನ ಸಂತೆಬಾಚಳ್ಳಿ ಹೋಬಳಿಯ ಜನ ತಾವು ಹಣ ಕಟ್ಟಿದ ಏಜೆಂಟ್ ನನ್ನು ಹಿಡಿದುಕೊಂಡು ಬಂದು ಕಚೇರಿಯಲ್ಲೇ ಪ್ರತಿಭಟನೆ ನಡೆಸಿದರು. ಯಾವುದೇ ನಿರ್ದೇಶಕರು ಹಾಗೂ ಅಧ್ಯಕ್ಷರು ಸ್ಥಳಕ್ಕೆ ಆಗಮಿಸದಿದ್ದಾಗ, ಲಕ್ಷ್ಮೀಪುರಂ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸುಮಾರು 10 ಕೋಟಿಗೂ ಹೆಚ್ಚು ಹಣ ದುರುಪಯೋಗ ಆಗಿದೆ ಎಂದು ದೂರು ದಾಖಲಾಗಿದೆ.