ಚಿತ್ರದುರ್ಗ: ಚಲಿಸುತ್ತಿದ್ದ ಕಾರು ಪಲ್ಟಿಯಾದ ಪರಿಣಾಮ ಮೂವರು ಮೃತಪಟ್ಟು ಮತ್ತೆ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಚಿತ್ರದುರ್ಗದ ಮೊಳಕಾಲ್ಮೂರು ತಾಲೂಕಿನ ರಾಂಪುರ ಬಳಿ ಶುಕ್ರವಾರ ಸಂಭವಿಸಿದೆ. ಸುರೇಶ್ (40), ಮಲ್ಲಿಕಾರ್ಜುನ (25) ಮತ್ತು ಭೂಮಿಕ (9) ಮೃತ ದುರ್ದೈವಿಗಳು.
ನಾಗಮ್ಮ (31), ತಾಯಮ್ಮ (56), ಧನರಾಜ್ (39) ಹಾಗೂ ಚಾಲಕ ಶಿವು (26) ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ರಾಂಪುರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೃತರೆಲ್ಲರೂ ಬಳ್ಳಾರಿಯ ಸಿರುಗುಪ್ಪ ಮೂಲದವರೆಂದು ತಿಳಿದು ಬಂದಿದೆ.
ಮೃತ ಸುರೇಶನ ಅಜ್ಜಿ ಹುಲಿಗಮ್ಮ (66) ಎಂಬುವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಅಸುನೀಗಿದ್ದರು. ಬೆಂಗಳೂರಿನಿಂದ ಮೃತ ಅಜ್ಜಿಯ ಶವವನ್ನು ಕಾರಿನಲ್ಲಿ ಸಿರುಗುಪ್ಪಗೆ ಕರೆತರಲಾಗುತ್ತಿತ್ತು. ಆದರೆ, ರಾಂಪುರ ಬಳಿಯ ಗ್ರ್ಯಾಂಡ್ ಪೋರ್ಡ್ ಹೋಟೆಲ್ ಬಳಿ ಕಾರಿನ ಟೈರ್ ಇದ್ದಕ್ಕಿದ್ದಂತೆ ಬ್ಲಾಸ್ಟ್ ಆಗಿ ಕಾರು ಪಲ್ಟಿಯಾಗಿದೆ. ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರು ಪಲ್ಟಿ ಹೊಡೆದ ದೃಶ್ಯ ಸಿಸಿಟಿವಿಲ್ಲಿ ಸೆರೆಯಾಗಿದೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪಿಎಸ್ಐ ಪರಶುರಾಮ್ ಲಮಾಣಿ ಪರಿಶೀಲನೆ ನಡೆಸಿದರು. ರಾಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇದಕ್ಕೂ ಮುನ್ನ ಚಿತ್ರದುರ್ಗ ತಾಲೂಕಿನ ಮದಕರಿಪುರ ಗ್ರಾಮದ ಸಮೀಪ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಟ್ಯಾಂಕರ್ ಲಾರಿಗೆ ಕಾರು ಡಿಕ್ಕಿಯಾದ ಪರಿಣಾಮ ಇಬ್ಬರು ಮಹಿಳೆಯರು ಸಾವನ್ನಪ್ಪಿ, ಮೂವರು ಗಾಯಗೊಂಡ ಘಟನೆ ನಡೆದಿತ್ತು. ಮೃತಪಟ್ಟ ಮಹಿಳೆಯರನ್ನು ಬೆಂಗಳೂರಿನ ನಿರ್ಮಲಾ(55), ವಿನುತಾ(40) ಎಂದು ಗುರುತಿಸಲಾಗಿತ್ತು. ಗಾಯಾಳುಗಳಾದ ಫಣಿರಾಜ್ (36), ರಶ್ಮಿ(32) ಮತ್ತು ಯಶಸ್(2) ಎಂಬವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಗಳೂರಿಂದ ಹೊಸಪೇಟೆಗೆ ತೆರಳುತ್ತಿದ್ದಾಗ ಅಪಘಾತ ನಡೆದಿದೆ. ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಸ್ತೆ ಅಪಘಾತದಿಂದ ಶುಕ್ರವಾರ ಒಂದೇ ದಿನ ಜಿಲ್ಲೆಯಲ್ಲಿ ಒಟ್ಟು ಐದು ಜನ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಮತ್ತೆ ಸೋರಿಕೆ ಆಯ್ತೇ ಪ್ರಶ್ನೆಪತ್ರಿಕೆ?: ಪೊಲೀಸ್ ಠಾಣೆ ಮುಂದೆ ಅಭ್ಯರ್ಥಿಗಳ ಪ್ರತಿಭಟನೆ