ಶಿವಮೊಗ್ಗ: ಗಾಂಜಾ ವಿಚಾರಕ್ಕೆ ನಡೆದ ಗಲಾಟೆ ಯುವಕನ ಕೊಲೆಯಲ್ಲಿ ಅಂತ್ಯಗೊಂಡಿದೆ. ಭದ್ರಾವತಿಯ ಸಾಯಿ ನಗರದಲ್ಲಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. ಇಲ್ಲಿನ ಬಡಾವಣೆಯ ನಿವಾಸಿ ನವೀನ್ ಕುಮಾರ್ (24) ಕೊಲೆಯಾದ ಯುವಕ.
ನವೀನ್ ಕುಮಾರ್ ಹಾಗೂ ಬೇರೆ ಯುವಕರು ಸಾಯಿ ನಗರದ ಖಾಲಿ ಜಾಗದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದರು. ಈ ವೇಳೆ ಸಣ್ಣ ಗಲಾಟೆ ನಡೆದಿದೆ. ಗಲಾಟೆಯ ನಂತರ ಯುವಕರು, ನವೀನ್ ಕುಮಾರ್ಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಬಳಿಕ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಜಿಲ್ಲೆಯಲ್ಲಿ ಗಾಂಜಾ ಮಾರಾಟ ತಡೆದಿದ್ದೇವೆ ಎಂದು ಅಧಿಕಾರಿಗಳು ಹೇಳುತ್ತಿದ್ದರೂ ಸಹ ಗಾಂಜಾ ಹೇಗೆ ಪೂರೈಕೆಯಾಗುತ್ತಿದೆ ಎಂಬುದು ಯಕ್ಷ ಪ್ರೆಶ್ನೆಯಾಗಿದೆ. ಸದ್ಯ ಮೃತ ನವೀನ್ ಕುಮಾರ್ ಶವವನ್ನು ಭದ್ರಾವತಿಯ ತಾಲೂಕು ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಸಂಬಂಧ ಹೊಸಮನೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಾಂಜಾ ಮಾರಾಟ ಮೂವರ ಬಂಧನ: ಮಂಗಳೂರು ನಗರದಲ್ಲಿ ಕಾಲೇಜು ವಿದ್ಯಾರ್ಥಿಗಳು, ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳಿಗೆ ಹಾಗು ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಮೆಡಿಕಲ್ ವಿದ್ಯಾರ್ಥಿ ಸಹಿತ ಮೂರು ಮಂದಿಯನ್ನು ಮಂಗಳೂರು ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. ಮಂಗಳೂರು ದಕ್ಷಿಣ ಠಾಣೆ ಪೊಲೀಸರು ಮತ್ತು ಮಂಗಳೂರು ಸಿಸಿಬಿ ಘಟಕದ ಅಧಿಕಾರಿ, ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಿ 1,40,000 ರೂ ಮೌಲ್ಯದ 5 ಕೆ.ಜಿ 400 ಗ್ರಾಂ ಗಾಂಜಾ ಹಾಗೂ 4 ಮೊಬೈಲ್ ಫೋನ್ ಗಳನ್ನು ಮತ್ತು 1 ಟ್ಯಾಬ್ ವಶಪಡಿಸಿಕೊಂಡಿದ್ದರು.
ಇದನ್ನೂ ಓದಿ: ಗಾಂಜಾ ಮಾರಾಟ: ಮೆಡಿಕಲ್ ವಿದ್ಯಾರ್ಥಿ ಸೇರಿ ಮೂವರ ಬಂಧನ
ರೌಡಿಶೀಟರ್ ಬರ್ಬರ ಹತ್ಯೆ: ಚುನಾವಣೆ ಸಮಯದಲ್ಲಿ ಗಡಿಪಾರು ಆದೇಶ ನೀಡಲಾಗಿದ್ದ ರೌಡಿಶೀಟರ್ನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಬೆಂಗಳೂರಿನ ಜೋಗುಪಾಳ್ಯ ಮುಖ್ಯ ರಸ್ತೆಯಲ್ಲಿ ಇತ್ತೀಚೆಗೆ ನಡೆದಿತ್ತು. ಕಾರ್ತಿಕ್ ಹಲಸೂರು ಕೊಲೆಯಾದ ರೌಡಿ ಶೀಟರ್. ಘಟನೆ ಸಂಬಂಧ ಹಲಸೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಏ.11ರಂದು ಸಂಜೆ 6 ಗಂಟೆಯ ಸಮಯ ಹಲಸೂರಿನ ಜೋಗುಪಾಳ್ಯ ಮುಖ್ಯರಸ್ತೆಯಲ್ಲಿ ಕಾರ್ತಿಕ್ ನಡೆದುಕೊಂಡು ಬರುತ್ತಿದ್ದ. ಈ ವೇಳೆ ಮಾರಕಾಸ್ತ್ರಗಳೊಂದಿಗೆ ಬಂದ ಹಂತಕರು ಏಕಾಏಕಿ ಮೇಲೆರಗಿದ್ದಾರೆ. ಪ್ರಾಣ ಉಳಿಸಿಕೊಳ್ಳಲು ಕಾರ್ತಿಕ್ ಪಕ್ಕದಲ್ಲೇ ಇದ್ದ ಗಲ್ಲಿಯಲ್ಲಿ ಓಡಿಹೋಗಿದ್ದ. ಹಿಮ್ಮೆಟ್ಟಿ ಬಂದ ಹಂತಕರು ಗುರುತು ಸಿಗದಂತೆ ಕೊಚ್ಚಿ ಕೊಲೆ ಮಾಡಿದ್ದರು.
ಇದನ್ನೂ ಓದಿ: ಬೆಂಗಳೂರು: ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಬರ್ಬರ ಹತ್ಯೆ