ಶಿವಮೊಗ್ಗ: ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ, ಮುಂದಿನ ಮೂರೂವರೆ ವರ್ಷ ಯಡಿಯೂರಪ್ಪನವರೇ ಸಿಎಂ ಆಗಿ ಮುಂದುವರೆಯಲಿದ್ದಾರೆ. ಸಿಎಂ ಸ್ಥಾನದಲ್ಲಿ ಒಬ್ಬರು ಇರುವಾಗಲೇ ಪ್ರತಿಪಕ್ಷಗಳು ಇನ್ನೊಬ್ಬರನ್ನು ಕೂರಿಸಲು ಹೊರಟಿವೆ ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ ಟೀಕಿಸಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಲ್ಲಿಕಾರ್ಜುನ್ ಖರ್ಗೆಯವರನ್ನು ಸಿಎಂ ಮಾಡುವ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯನವರನ್ನು ಒಪ್ಪಿಸಲಾಗುತ್ತಿದೆ ಎಂಬ ವಿಚಾರ ತಿಳಿದಿದೆ. ಆದರೆ ಖರ್ಗೆಯವರನ್ನು ಕರ್ನಾಟಕಕ್ಕೆ ಸಿಎಂ ಮಾಡುತ್ತಾರಾ ಅಥವಾ ಬೇರೆ ರಾಜ್ಯಕ್ಕೆ ಮಾಡುತ್ತಾರಾ ಎಂಬುದು ಗೊತ್ತಾಗುತ್ತಿಲ್ಲ. ಮೊದಲನೆಯದಾಗಿ ರಾಜ್ಯದಲ್ಲಿ ಸಿಎಂ ಹುದ್ದೆಯೇ ಖಾಲಿ ಇಲ್ಲ ಎಂದು ಹೇಳಿದರು.
ದಲಿತ ಸಿಎಂ ಮಲ್ಲಿಕಾರ್ಜುನ್ ಖರ್ಗೆ ಎಂದು ಹೇಳುವ ಮೂಲಕ ಕಾಂಗ್ರೆಸ್ನವರು ಖರ್ಗೆಯವರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ನವರಿಗೆ ಜಾತಿ ಹೆಸರು ಹೇಳಿ ರಾಜಕಾರಣ ಮಾಡಲಿಲ್ಲವೆಂದರೆ ತಿಂದ ಅನ್ನ ಜೀರ್ಣ ಆಗುವುದಿಲ್ಲ. ಸಿಎಂ ಸ್ಥಾನ ಯಾವುದೇ ಒಂದು ಜಾತಿಗೆ ಸೀಮಿತವಾದುದಲ್ಲ. ಆದರೆ ಕಾಂಗ್ರೆಸ್ನವರು ಲಿಂಗಾಯತ ಸಿಎಂ, ಒಕ್ಕಲಿಗ ಸಿಎಂ, ಕುರುಬ ಸಿಎಂ, ದಲಿತ ಸಿಎಂ ಎಂದು ಜಾತಿ ಎಳೆದು ತರುತ್ತಿರುವುದು ಸರಿಯಲ್ಲ. ಚುನಾವಣೆ ನಂತರ ಕಾಂಗ್ರೆಸ್ ಪ್ರತಿಪಕ್ಷ ಸ್ಥಾನ ಉಳಿಸಿಕೊಳ್ಳಲು ಪ್ರಯತ್ನ ಮಾಡಬೇಕಾಗುತ್ತೆ ಎಂದರು.
ಇನ್ನು ಚುನಾವಣಾ ಫಲಿತಾಂಶದ ನಂತರ ಕಾಂಗ್ರೆಸ್ ಹಾಗೂ ಜೆಡಿಎಸ್ನ ಇನ್ನಷ್ಟು ಶಾಸಕರು ಬಿಜೆಪಿಗೆ ಬರುತ್ತಾರೆ. ಹಾಗಂತ ನಾವೇನು ಆಪರೇಷನ್ ಕಮಲ ಮಾಡುವುದಿಲ್ಲ, ಆ ಪಕ್ಷಗಳಿಗೆ ಭವಿಷ್ಯ ಇಲ್ಲವೆಂದು ಆ ಶಾಸಕರುಗಳೇ ನಮ್ಮ ಪಕ್ಷಕ್ಕೆ ಬರುವ ತೀರ್ಮಾನ ಮಾಡಲಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಎರಡು ಸ್ಥಾನಕ್ಕೆ ಸೀಮಿತ ಅಂತ ಕಾಂಗ್ರೆಸ್ ಹಾಗೂ ಜೆಡಿಎಸ್ನವರು ಹೇಳಿದ್ರು. ಆದರೆ ಬಿಜೆಪಿ 25 ಸ್ಥಾನ ಪಡೆಯಿತು. ಲೋಕಸಭಾ ಫಲಿತಾಂಶವು ಉಪ ಚುನಾವಣೆಯಲ್ಲಿ ಮರುಕಳಿಸಲಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಒಂದೊಂದು ಸ್ಥಾನ ಪಡೆದರೂ ಆಶ್ಚರ್ಯ ಇಲ್ಲ, ಬಿಜೆಪಿಗೆ ಹೆಚ್ಚಿನ ಸ್ಥಾನ ಬರುತ್ತೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.