ಶಿವಮೊಗ್ಗ: ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಕೋವಿಡ್ ವಿಚಾರದಲ್ಲಿ ಯಡಿಯೂರಪ್ಪನವರ ವಿರುದ್ಧ ಸತ್ಯ ನುಡಿದಿದ್ದಾರೆ. ಅವರ ಆರೋಪದ ಕುರಿತು ಸರ್ಕಾರ ತನಿಖೆ ನಡೆಸುವುದು ಒಳ್ಳೆಯದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಇಂದು ಮಾತನಾಡಿದ ಅವರು, ವಿಪಕ್ಷದಲ್ಲಿದ್ದಾಗ ನಾವೂ ಕೂಡ ಇದನ್ನೇ ಹೇಳಿದ್ದೆವು. ಸರ್ಕಾರದ ಹಣ ದುರ್ಬಳಕೆ ಆಗಬಾರದು ಎಂದರು.
ಪ್ರತಾಪ್ ಸಿಂಹ ಹೇಳಿಕೆ ವಿಚಾರ: ಪ್ರತಾಪ್ ಸಿಂಹ ಅವರೇನು ಅಂತಾ ಅವರೇ ಹೇಳಿಕೊಂಡಿದ್ದಾರೆ. ಮಾಧ್ಯಮದಲ್ಲಿ ಮಾತನಾಡಿಕೊಂಡು ಹೋಗುವುದು ಬಿಟ್ಟರೆ ಅವರೇನು ಮಾಡಿದ್ದಾರೆ? ನಾನು ಬರಹಗಾರ ಅಂತಾ ಹೇಳಿಕೊಂಡು ಹೋಗಿಬಿಟ್ಟರೆ ಅದು ತಪ್ಪು. ಯೋಜನೆಗಳು ಅನುಷ್ಠಾನ ಆಗುವಂಥದ್ದು ಏನು ಮಾಡಿದ್ದಾರೆ?. ಅವರ ಮಾತುಗಳು ಅವರ ಘನತೆ, ಗೌರವ ತೋರಿಸುತ್ತದೆ ಎಂದು ಟೀಕಿಸಿದರು.
ತುಂಗಭದ್ರಾ ಸಕ್ಕರೆ ಕಾರ್ಖಾನೆ: ತುಂಗಭದ್ರಾ ಸಕ್ಕರೆ ಕಾರ್ಖಾನೆ ವಿಚಾರವಾಗಿ ರೈತರು ನನಗೂ ಮನವಿ ಕೊಟ್ಟಿದ್ದಾರೆ. ಸಂಸದರು ಹಗುರವಾಗಿ ಮಾತನಾಡಿದ್ದಾರೆ. ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡಿಕೊಂಡ್ರು ಅನ್ನುವ ಹಾಗೆ ವರ್ತಿಸಿದ್ದಾರೆ. ಸಂಸದರು ಇಷ್ಟು ವರ್ಷ ಸುಮ್ಮನಿದ್ದು, ಈಗ ಮಾತನಾಡುತ್ತಿದ್ದಾರೆ. ಈಗ ಒಂದೇ ಸಾರಿ ಬೇರೆಯವರ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದರು.
ಸಂಸದ ರಾಘವೇಂದ್ರ ಹುಷಾರಾಗಿ ಮಾತನಾಡಬೇಕು. ಸಂಸದರ ಕುಮ್ಮಕ್ಕು ಇದೆ ಅಂತಾರೆ. ಇಂಥ ಕೆಲಸ ಮಾಡೋದು ಅಲ್ಲ. ಸಂಸದರಿಗೆ ಶರಾವತಿ ಸಂತ್ರಸ್ತರಿಗೆ ಹಕ್ಕುಪತ್ರ ಕೊಡುವ ಯೋಗ್ಯತೆ ಇಲ್ಲ. ಅವರ ತಂದೆ ಯಡಿಯೂರಪ್ಪ ಸಿಎಂ ಆಗಿದ್ದರು. ಅಧಿಕಾರದಲ್ಲಿದ್ದಾಗ ಒಂದೇ ಒಂದು ಹಕ್ಕುಪತ್ರ ಕೊಡಲು ಆಗಲಿಲ್ಲ. ಈಗ ವಿಪಕ್ಷದಲ್ಲಿದ್ದಾಗ ಸುಮ್ಮನೆ ಪುಕ್ಸಟ್ಟೆ ಭಾಷಣ ಮಾಡುತ್ತಾರೆ ಎಂದು ಹೇಳಿದರು.
ಒಂದೇ ಒಂದು ದಿನ ಹೋಗಿ ಪಾರ್ಲಿಮೆಂಟ್ನಲ್ಲಿ ಮಾತನಾಡದ ಇವರಿಗೆ ನಾಚಿಕೆ ಆಗಬೇಕು. ಕಾನೂನು ತಜ್ಞರನ್ನು ಇಟ್ಟುಕೊಂಡು ಜನರ ಪರವಾಗಿ ಏನೇನು ಕೆಲಸ ಮಾಡಬೇಕೋ ಮಾಡುತ್ತೇನೆ. ಕಾನೂನು ಹೋರಾಟ ಮಾಡಲು ಸಂಪೂರ್ಣ ಸಹಕಾರ ಕೊಡುತ್ತೇವೆ ಎಂದರು.
ಕೋವಿಡ್ ಬಗ್ಗೆ ಭಯ ಅವಶ್ಯಕತೆ ಇಲ್ಲ: ಶಿವಮೊಗ್ಗ ಜಿಲ್ಲೆಯಲ್ಲಿ ಕೋವಿಡ್ ಸದ್ಯಕ್ಕೆ ಜಾಸ್ತಿ ಇಲ್ಲ. ಜನರೂ ಸಹ ಕೋವಿಡ್ ಮರೆತುಬಿಟ್ಟಿದ್ದಾರೆ. ಸಹಕಾರ ಕೊಡಬೇಕು. ಗೈಡ್ಲೈನ್ಸ್ ಫಾಲೋ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಇದನ್ನೂ ಓದಿ: ಹಿಂದಿನ ಸರ್ಕಾರದಲ್ಲಿ ಕೊರೊನಾ ವೇಳೆ ₹40 ಸಾವಿರ ಕೋಟಿ ಅವ್ಯವಹಾರ: ಯತ್ನಾಳ್ ಗಂಭೀರ ಆರೋಪ