ಶಿವಮೊಗ್ಗ: ಜಿಲ್ಲೆಯಲ್ಲಿ 22ಕ್ಕೂ ಹೆಚ್ಚು ಪ್ರವಾಸಿ ತಾಣಗಳಿದ್ದು, ಅವುಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಪ್ರವಾಸೋದ್ಯಮವನ್ನು ಇನ್ನೂ ಎತ್ತರಕ್ಕೆ ತೆಗೆದುಕೊಂಡು ಹೋಗಬಹುದು ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಅಭಿಪ್ರಾಯಪಟ್ಟರು.
ಪ್ರವಾಸೋದ್ಯಮ ಇಲಾಖೆ, ಕುವೆಂಪು ವಿಶ್ವವಿದ್ಯಾನಿಲಯ ಹಾಗೂ ಸಹ್ಯಾದ್ರಿ ಕಾಲೇಜು ಆಯೋಜಿಸಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ನೂತನ ಪ್ರಯೋಗಗಳನ್ನು ಮಾಡಿದರೆ ಯುವಜನತೆಗೆ ಹೆಚ್ಚಿನ ಉದ್ಯೋಗವಕಾಶಗಳು ದೊರೆಯುವ ಸಾಧ್ಯತೆಯಿದೆ. ಯುವಜನತೆ ಇಲ್ಲಿನ ಪ್ರವಾಸೋದ್ಯಮದ ಸಾಧ್ಯತೆಗಳನ್ನು ಅನ್ವೇಷಿಸಿದರೆ ಜಿಲ್ಲೆಗೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸಲು ಸಾಧ್ಯವಿದೆ ಎಂದರು.
ಪ್ರವಾಸೋದ್ಯಮ ಅಧ್ಯಯನದ ಮೂಲಕ ವಿದ್ಯಾರ್ಥಿಗಳು ತಮ್ಮದೇ ಊರಿನ ಸುತ್ತಮುತ್ತಲಿನ ಪ್ರವಾಸಿ ತಾಣಗಳನ್ನು ಆಯ್ಕೆ ಮಾಡಿಕೊಂಡು ಸೂಕ್ತ ರೀತಿಯಲ್ಲಿ ಪ್ರಚಾರ ನೀಡುವ ಮೂಲಕ ಉದ್ಯೋಗವಕಾಶಗಳನ್ನು ಸೃಷ್ಟಿಸಬಹುದಾಗಿದೆ. ಜಿಲ್ಲೆಯ ಪ್ರವಾಸಿ ತಾಣಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸುವ ಯೋಜನೆಗಳು ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಹೆಚ್.ಎಂ ವಾಗ್ದೇವಿ ಮಾತನಾಡಿ, ಪ್ರವಾಸೋದ್ಯಮ ಅಧ್ಯಯನದ ವಿದ್ಯಾರ್ಥಿಗಳು ಇದರಲ್ಲಿ ಹೆಚ್ಚು- ಹೆಚ್ಚು ಸಂಶೋಧನೆಗಳನ್ನು ನಡೆಸಿ ಸ್ಥಳೀಯ ಪ್ರದೇಶಗಳನ್ನು ಪ್ರವಾಸೋದ್ಯಮ ತಾಣವಾಗಿ ಅಭಿವೃದ್ದಿಪಡಿಸಬೇಕು. ಮುಂದುವರಿದ ದೇಶಗಳು ಪ್ರವಾಸೋದ್ಯಮದಿಂದಲೇ ಹೆಚ್ಚಿನ ಆದಾಯಗಳಿಸುತ್ತಿದ್ದು, ನಮ್ಮ ದೇಶದಲ್ಲೂ ಸಹ ಅಂತಹ ಕಾರ್ಯಗಳು ಆಗಬೇಕಿದೆ. ಪ್ರತಿಯೊಬ್ಬ ವಿದ್ಯಾರ್ಥಿಯು ಈ ಕುರಿತು ಪ್ರಾಮಾಣಿಕ ಪ್ರಯತ್ನದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಎಲ್. ಹನುಮ ನಾಯ್ಕ್ ಹಾಗೂ ಕಾಲೇಜಿನ ಪ್ರವಾಸೋದ್ಯಮ ವಿಭಾಗದ ಮುಖ್ಯಸ್ಥ ಯು ಶಶಿರಾಜ ಉಪಸ್ಥಿತರಿದ್ದರು.