ಶಿವಮೊಗ್ಗ: ರೈಲ್ವೆ ಮೇಲ್ಸೇತುವೆ ಕೆಳಭಾಗದ ಅಂಡರ್ ಗ್ರೌಂಡ್ ಪೈಪ್ಲೈನ್ ಅಳವಡಿಕೆಗಾಗಿ ಮಣ್ಣು ತೆಗೆಯುವಾಗ ಮಣ್ಣು ಕುಸಿದು ಕಾರ್ಮಿಕನೊಬ್ಬ ಮೃತಪಟ್ಟಿರುವ ಘಟನೆ ನಗರದಲ್ಲಿ ನಡೆದಿದೆ. ಮಣ್ಣು ಕುಸಿದು ಮೃತಪಟ್ಟ ಕಾರ್ಮಿಕನನ್ನು ಶಿವಮೊಗ್ಗ ತಾಲೂಕು ಮಂಡೆನಕೊಪ್ಪದ ಸತೀಶ್ ನಾಯ್ಕ ಎಂದು ಗುರುತಿಸಲಾಗಿದೆ.
ಶಿವಮೊಗ್ಗದ ನವಲೆ ರಸ್ತೆಯ ಭಾಗದಲ್ಲಿ ನಡೆಯುತ್ತಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿಯಲ್ಲಿ ಮೇಲ್ಸೇತುವೆ ಕೆಳಭಾಗದಲ್ಲಿ ಅಂಡರ್ ಗ್ರೌಂಡ್ ಪೈಪ್ ಅಳವಡಿಕೆ ಕಾರ್ಯ ನಡೆಸಲಾಗುತ್ತಿದೆ. ಜೆಸಿಬಿ ಮೂಲಕ ಮಣ್ಣು ತೆಗೆದು ಪೈಪ್ ಅಳವಡಿಸಲಾಗುತ್ತಿತ್ತು. ಪೈಪ್ ಅಳವಡಿಕೆ ಮಾಡಲು ಮಣ್ಣು ತೆಗೆದು ಎರಡು ಅಡಿ ಗಾತ್ರದ ಕಾಂಕ್ರಿಟ್ ಪೈಪ್ಗಳನ್ನು ಅಳವಡಿಸಲು ಹೋದಾಗ ಮಣ್ಣು ಕುಸಿದಿದೆ. ಈ ವೇಳೆ, ಸತೀಶ್ ನಾಯ್ಕ ಮಣ್ಣಿನಡಿ ಸಿಲುಕಿದಾಗ ಆತನನ್ನು ಮೇಲಕ್ಕೆ ಎತ್ತಲು ಜೆಸಿಬಿ ಯತ್ನಿಸುವಾಗ ಜೆಸಿಬಿಯ ಬಕೆಟ್ ಸತೀಶ್ ನಾಯ್ಕನ ತಲೆಗೆ ತಾಗಿದೆ. ಉಸಿರಾಟ ತೊಂದರೆ ಮತ್ತು ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ತಕ್ಷಣ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿ ಸ್ಥಳದಲ್ಲಿದ್ದವರು ಮಾಹಿತಿ ನೀಡಿದ್ದಾರೆ. ಈ ಕುರಿತು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಮಂಡ್ಯದಲ್ಲಿ ವಿದ್ಯುತ್ ತಂತಿ ತುಳಿದು ಯುವ ರೈತ ಸಾವು: ಚೆಸ್ಕಾಂ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ
ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಯುವ ರೈತನೊಬ್ಬ ಮೃತಪಟ್ಟಿರುವ ಇಂತಹದ್ದೇ ಮತ್ತೊಂದು ಘಟನೆ ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಬೆಳತೂರು ಗ್ರಾಮದ ಬಳಿಯಲ್ಲಿ ನಡೆದಿದೆ. ರವಿಕುಮಾರ್(43) ಮೃತರು.
ರವಿಕುಮಾರ್ ರಾಜೇನಹಳ್ಳಿ ಗ್ರಾಮದ ನಿವಾಸಿಯಾಗಿದ್ದು, ಗುರುವಾರ ಕಟ್ಟೆಕ್ಯಾತನಹಳ್ಳಿಯ ಬೆಳತೂರು ಬಳಿ ಇರುವ ತಮ್ಮ ಜಮೀನಿನಲ್ಲಿ ಹುಲ್ಲು ಕೊಯ್ಯಲು ತೆರಳಿದ್ದರು. ಆಗ ಟಿಸಿಯಿಂದ ತುಂಡಾಗಿ ಬಿದಿದ್ದ ವಿದ್ಯುತ್ ತಂತಿಯನ್ನು ಗಮನಿಸದೇ ಬದುವಿನ ಮೇಲೆ ತೆರಳಿದ ವೇಳೆ ವಿದ್ಯುತ್ ಪ್ರವಹಿಸಿ ಸ್ಥಳದಲ್ಲಿಯೇ ರವಿಕುಮಾರ್ ಸಾವನ್ನಪ್ಪಿದ್ದರು.
ಸಂಜೆಯಾದರೂ ಮನೆಗೆ ಬಾರದ ರವಿಕುಮಾರ್ ಅವರನ್ನು ಹುಡುಕಿಕೊಂಡು ಅವರ ಭಾವಮೈದುನ ಜಮೀನಿನ ಬಳಿ ಬಂದಿದ್ದರು. ಈ ವೇಳೆ ರವಿಕುಮಾರ್ ಮೃತದೇಹ ಪತ್ತೆಯಾಗಿತ್ತು. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರವಿಕುಮಾರ್ ಸಾವಿಗೆ ಚೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಗ್ರಾಮಸ್ಥರು ಹಾಗೂ ಮೃತನ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ತರಲಾಗಿದೆ.