ಶಿವಮೊಗ್ಗ: ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಬಿಜೆಪಿಯ ಸುನೀತ ಅಣ್ಣಪ್ಪ ಹಾಗೂ ಉಪಮೇಯರ್ ಶಂಕರ್ ಗನ್ನಿ ಆಯ್ಕೆಯಾಗಿದ್ದಾರೆ. ಇಂದು ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಮೇಯರ್ ಸ್ಥಾನಕ್ಕೆ ಬಿಜೆಪಿಯ ಸುನೀತ ಅಣ್ಣಪ್ಪ ಹಾಗೂ ಉಪಮೇಯರ್ ಸ್ಥಾನಕ್ಕೆ ಶಂಕರ್ ಗನ್ನಿ ನಾಮಪತ್ರ ಸಲ್ಲಿಸಿದ್ದರು.
ಕಾಂಗ್ರೆಸ್ನಿಂದ ಮೇಯರ್ ಸ್ಥಾನಕ್ಕೆ ರೇಖಾ ರಂಗನಾಥ್ ಹಾಗೂ ಉಪಮೇಯರ್ ಸ್ಥಾನಕ್ಕೆ ಅರ್.ಸಿ. ನಾಯ್ಕ್ ನಾಮಪತ್ರ ಸಲ್ಲಿಸಿದ್ದರು. ಚುನಾವಣೆಯು ಬೆಂಗಳೂರು ಪ್ರಾದೇಶಿಕ ಆಯುಕ್ತ ನವೀನ್ ರಾಜ್ ಸಿಂಗ್ ಸಮ್ಮುಖದಲ್ಲಿ ನಡೆಯಿತು. ಮೇಯರ್ ಸ್ಥಾನಕ್ಕೆ ಬಿಜೆಪಿಯ ಸುನೀತ ಅಣ್ಣಪ್ಪ ಪರವಾಗಿ 25 ಮತ, ಕಾಂಗ್ರೆಸ್ನ ರೇಖಾ ರಂಗನಾಥ್ ಪರ 11 ಮತಗಳು ಬಿದ್ದವು. ಅದೇ ರೀತಿ ಉಪಮೇಯರ್ ಚುನಾವಣೆಯಲ್ಲಿ ಬಿಜೆಪಿಯ ಶಂಕರ್ ಗನ್ನಿ ರವರಿಗೆ 24 ಮತ ಹಾಗೂ ಕಾಂಗ್ರೆಸ್ನ ಆರ್.ಸಿ. ನಾಯ್ಕರವರಿಗೆ 11 ಮತಗಳು ಬಿದ್ದವು. ಅಧಿಕ ಮತ ಪಡೆದ ಬಿಜೆಪಿಯ ಮೇಯರ್ ಆಗಿ ಸುನೀತ ಅಣ್ಣಪ್ಪ ಹಾಗೂ ಉಪ ಮೇಯರ್ ಆಗಿ ಬಿಜೆಪಿಯ ಶಂಕರ್ ಗನ್ನಿ ಆಯ್ಕೆ ಆಗಿದ್ದಾರೆ ಎಂದು ಪ್ರಾದೇಶಿಕ ಆಯುಕ್ತ ನವೀನ್ ರಾಜ್ ಸಿಂಗ್ ಘೋಷಣೆ ಮಾಡಿದರು.
ಮೇಯರ್ ಸ್ಥಾನ ಬಿಸಿಎಂ ( ಎ) ಮಹಿಳೆಗೆ ಹಾಗೂ ಉಪಮೇಯರ್ ಸಾಮಾನ್ಯ ಪುರುಷಕ್ಕೆ ಮೀಸಲಾಗಿತ್ತು. ನೂತನವಾಗಿ ಮೇಯರ್ ಆಗಿ ಆಯ್ಕೆಯಾದ ಸುನೀತ ಅಣ್ಣಪ್ಪ ಪಾಲಿಕೆಯ 29 ನೇ ವಾರ್ಡ್ ಸದಸ್ಯರಾಗಿದ್ದು, ಸತತ ಮೂರನೇ ಬಾರಿ ಆಯ್ಕೆಯಾಗಿದ್ದಾರೆ. ನಮ್ಮ ಆಯ್ಕೆಗೆ ಕಾರಣರಾದ ಬಿಜೆಪಿಯ ವರಿಷ್ಠರಿಗೆ, ಬಿಜೆಪಿಯ ನಾಯಕರುಗಳಿಗೆ ಹಾಗೂ ತಮ್ಮ ವಾರ್ಡ್ನ ಮತದಾರರಿಗೆ ಅಭಿನಂದನೆ ಸಲ್ಲಿಸಿದರು. ತಮ್ಮ ಅವಧಿಯಲ್ಲಿ ನಗರದ ಪಾರ್ಕ್ಗಳನ್ನು ಅಭಿವೃದ್ದಿ ಪಡಿಸುವುದು, ಸ್ಮಾರ್ಟ್ ಸಿಟಿ ಕಾಮಗಾರಿಯನ್ನು ಚುರುಕುಗೊಳಿಸುವುದು ಹಾಗೂ ನಗರದ ಸೌಂದರ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮವಹಿಸುವುದಾಗಿ ತಿಳಿಸಿದರು.
ಓದಿ:ಸಿಎಂ ತವರಲ್ಲಿ ಬಿಜೆಪಿ ವಿರುದ್ಧ ಭಾರಿ ಹೋರಾಟಕ್ಕೆ ಸಜ್ಜಾದ ಕಾಂಗ್ರೆಸ್!
ಚುನಾವಣೆಯ ನಂತರ ನೂತನ ಮೇಯರ್ ಹಾಗೂ ಉಪಮೇಯರ್ಗೆ ಗ್ರಾಮೀಣಾಭಿವೃದ್ದಿ ಖಾತೆ ಸಚಿವ ಕೆ.ಎಸ್. ಈಶ್ವರಪ್ಪ ಹೂಗುಚ್ಛ ನೀಡಿ ಅಭಿನಂದಿಸಿದರು. ನಂತರ ಮಾತನಾಡಿದ ಅವರು, ಶಿವಮೊಗ್ಗ ಜನತೆ ಅಭಿವೃದ್ದಿ ಪರವಾಗಿ ಬಿಜೆಪಿಗೆ ಬಹುಮತ ನೀಡಿ ಬೆಂಬಲಿಸಿದ್ದಾರೆ. ಅದರಂತೆ ಬಿಜೆಪಿಯು ಸಹ ಕಾರ್ಯನಿರ್ವಹಿಸುತ್ತಿದೆ. ಹಿಂದಿನ ಎರಡು ಅವಧಿಯಲ್ಲಿ ಬಿಜೆಪಿಯವರು ಒಳ್ಳೆಯ ಕೆಲಸ ಮಾಡಿದ್ದಾರೆ. ಅದರಂತೆ ಇವರು ಸಹ ಮುಂದುವರೆಸಿಕೊಂಡು ಹೋಗಬೇಕಿದೆ ಎಂದು ನೂತನ ಮೇಯರ್, ಉಪಮೇಯರ್ಗೆ ಸಲಹೆ ನೀಡಿದರು. ಶಿವಮೊಗ್ಗ ಸ್ಮಾರ್ಟ್ ಸಿಟಿಯಾಗಿದ್ದು, ಇದರಿಂದ ಹಸಿರು ಸ್ಮಾರ್ಟ್ ಸಿಟಿಯೊಂದಿಗೆ ಗ್ರೀನ್ ಸಿಟಿ ಮಾಡಲಾಗುವುದು ಎಂದರು.
ಭದ್ರಾವತಿಯ ಕಬ್ಬಡ್ಡಿ ಪಂದ್ಯಾವಳಿ ಘಟನೆಯನ್ನು ನಾವಂತೂ ರಾಜಕೀಯ ಮಾಡಲ್ಲ. ಆದರೆ ಕಾಂಗ್ರೆಸ್ ಅದನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ. ಕಬ್ಬಡ್ಡಿ ಪಂದ್ಯದಲ್ಲಿ ಬಿಜೆಪಿಯ ಕಡೆಯವರು ಇದ್ದ ತಂಡ ರನ್ನರ್ ಅಪ್ ಆಗಿದೆ. ಪಂದ್ಯ ಗೆದ್ದಾಗ ಸಂತೋಷ ಪಡುವುದು ಸಹಜ. ಈ ವೇಳೆ ರನ್ನರ್ ಅಪ್ ತಂಡದವರು ಜೈ ಶ್ರೀರಾಮ್, ಭಾರತ್ ಮಾತಾಕೀ ಜೈ ಎಂದು ಕೂಗಿದ್ದು ತಪ್ಪಾ ಎಂದು ಪ್ರತಿಭಟನೆಗೆ ಬರುತ್ತಿರುವ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಸೇರಿ ಉಳಿದವರು ಉತ್ತರ ನೀಡಲಿ. ಕಾಂಗ್ರೆಸ್ ಪಕ್ಷ ಛಿದ್ರವಾಗಿದೆ ಎಂದರು.