ಶಿವಮೊಗ್ಗ: ಸಾಲಗಾರನ ಕಾಟಕ್ಕೆ ಮನನೊಂದ ಮಹಿಳೆಯೊಬ್ಬರು ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಶಿವಮೊಗ್ಗ ತಾಲೂಕು ಸಿದ್ಲಿಪುರ ಗ್ರಾಮದ ಗೌರಮ್ಮ (55) ಸಾವಿಗೆ ಶರಣಾದ ಮಹಿಳೆ. ಸಾಲ ನೀಡಿದಾತ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದರಿಂದ ಮನನೊಂದು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಏನಿದು ಘಟನೆ: ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಗೌರಮ್ಮ ಪತಿ ಮಲ್ಲಿಕಾರ್ಜುನಪ್ಪ ಸ್ಥಳೀಯ ಲಂಕೇಶ್ ನಾಯ್ಕ್ ಎಂಬಾತನಿಂದ 10 ಸಾವಿರ ರೂಪಾಯಿ ಬಡ್ಡಿಗೆ 20 ಸಾವಿರ ರೂ. ಸಾಲ ಪಡೆದುಕೊಂಡಿದ್ದರು. ಸಾಲ ಮರುಪಾವತಿಸುವಾಗ 20 ಸಾವಿರದಲ್ಲಿ ಎರಡು ಸಾವಿರ ಬಡ್ಡಿ ಎಂದು ಲಂಕೇಶ್ ನಾಯ್ಕ್ ಮುರಿದುಕೊಂಡಿದ್ದನಂತೆ.
ಸಾಲ ವಾಪಾಸ್ ಕೊಟ್ಟ 15 ದಿನದ ಬಳಿಕ ಉಳಿದ 8 ಸಾವಿರ ರೂ. ಬಡ್ಡಿ ನೀಡುವಂತೆ ಮಲ್ಲಿಕಾರ್ಜುನಪ್ಪ ಮತ್ತು ಆತನ ಪತ್ನಿ ಗೌರಮ್ಮಗೆ ಲಂಕೇಶ್ ನಾಯ್ಕ್ ಕಿರುಕುಳ ನೀಡಲು ಶುರು ಮಾಡಿದ್ದನಂತೆ.
ಕಳೆದ ಗುರುವಾರ ರಾತ್ರಿ ಮಲ್ಲಿಕಾರ್ಜುನಪ್ಪ ಮತ್ತು ಗೌರಮ್ಮಗೆ ಬಾಕಿ ಹಣ ನೀಡುವಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದ. ಕೋವಿಡ್ ಸಮಯದಲ್ಲಿ ಸಾಲ ಮರುಪಾವತಿಗೆ ಒತ್ತಾಯಿಸದಂತೆ ಜಿಲ್ಲಾಡಳಿತದ ಆದೇಶ ಇದ್ದರೂ ಲಂಕೇಶ್ ನಾಯ್ಕ್ ಕಿರುಕುಳ ನೀಡಿದ್ದಾನೆ. ಇದರಿಂದ ಮನನೊಂದು ಗೌರಮ್ಮ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಗೌರಮ್ಮ ಸಾವಿಗೆ ಲಂಕೇಶ್ ನಾಯ್ಕನೇ ಕಾರಣ ಎಂದು ಅವರ ಪತಿ ಮತ್ತು ಮಕ್ಕಳು ಆರೋಪಿಸಿದ್ದಾರೆ. ಈ ಬಗ್ಗೆ ದೂರು ನೀಡಲು ಹೋದರೆ ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರು ದೂರು ಸ್ವೀಕರಿಸುತ್ತಿಲ್ಲ. ದೂರು ನೀಡಲು ಹೋದ ನಮಗೆ ಬೈಯ್ದು ಕಳುಹಿಸುತ್ತಿದ್ದಾರೆ ಎಂದು ಗೌರಮ್ಮ ಪತಿ ಮಲ್ಲಿಕಾರ್ಜುನಪ್ಪ ಆರೋಪ ಮಾಡಿದ್ದಾರೆ. ಮಹಿಳೆಯ ಸಾವಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಓದಿ : ಲಾಕ್ಡೌನ್ನಲ್ಲಿ ಮದ್ಯ ಮಾರಾಟ : ವೈನ್ ಶಾಪ್ ಮೇಲೆ ಅಬಕಾರಿ ಅಧಿಕಾರಿಗಳ ದಾಳಿ