ಶಿವಮೊಗ್ಗ: ಬದುಕಿನಲ್ಲಿ ಏನನ್ನಾದರೂ ಸಾಧಿಸಬೇಕು ಎಂಬ ಅದಮ್ಯ ಉತ್ಸಾಹ, ದುರ್ಯೋಧನ ಛಲವಿದ್ದರೆ ಬಯಸಿದ್ದನ್ನು ಸಾಧಿಸುವುದು ಕಷ್ಟವೇನಲ್ಲ. ಇದಕ್ಕೆ ಸಾಕಷ್ಟು ನಿದರ್ಶನಗಳು ಸಿಗುತ್ತವೆ. ಇದೀಗ ಹೊಸ ಸ್ಫೂರ್ತಿಸೆಲೆಯಾಗಿ ಇತಿಹಾಸ ಸೃಷ್ಟಿದ್ದಾರೆ ಐಎಎಸ್ ಅಧಿಕಾರಿ ಸುಹಾಸ್. ನಮ್ಮ ರಾಜ್ಯದವರೇ ಆಗಿರುವ ಸುಹಾಸ್ ಬಗ್ಗೆ ಒಂದಿಷ್ಟು ಕುತೂಹಲಕಾರಿ ಮಾಹಿತಿ ನಿಮಗಾಗಿ..
ಶಿವಮೊಗ್ಗ ಮೂಲದ ಐಎಎಸ್ ಅಧಿಕಾರಿ ಸುಹಾಸ್ ಪ್ಯಾರಾಲಿಂಪಿಕ್‌ನಲ್ಲಿ ಇಂದು ಬೆಳ್ಳಿಪದಕ ಗೆಲ್ಲುವ ದೇಶದ ಕೀರ್ತಿ ಪತಾಕೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಇನ್ನಷ್ಟು ಎತ್ತರಕ್ಕೇರಿಸಿದ್ದಾರೆ. ಪ್ಯಾರಾಲಿಂಪಿಕ್‌ನಂಥ ಜಾಗತಿಕ ಕ್ರೀಡೋತ್ಸವದಲ್ಲಿ ಪಾಲ್ಗೊಂಡು ಪದಕ ಪಡೆದ ದೇಶದ ಮೊದಲ ಹೆಮ್ಮೆಯ ಐಎಎಸ್ ಅಧಿಕಾರಿ ಎಂಬ ಕೀರ್ತಿಗೂ ಇವರು ಪಾತ್ರರಾಗಿದ್ದಾರೆ.
ಮೂಲತಃ ಹಾಸನದವರಾದರೂ ಇವರು ಹುಟ್ಟಿ, ಬೆಳೆದಿದ್ದೆಲ್ಲ ಶಿವಮೊಗ್ಗದಲ್ಲೇ. ತಂದೆ ಗಾಜನೂರು ಜಲಾಶಯದಲ್ಲಿ ಇಂಜಿನಿಯರ್ ಆಗಿದ್ದರು. ಹೀಗಾಗಿ, ಇವರ ಇಡೀ ಕುಟುಂಬ ಶಿವಮೊಗ್ಗಕ್ಕೆ ಬಂದು ನೆಲೆಸಿತ್ತು. ಹೀಗಾಗಿ, ಸುಹಾಸ್ ಪ್ರಾಥಮಿಕ, ಪದವಿ ಪೂರ್ವ ಶಿಕ್ಷಣವನ್ನೂ ಶಿವಮೊಗ್ಗದ ಡಿವಿಎಸ್ ಕಾಲೇಜಿನಲ್ಲೇ ಪೂರೈಸಿದರು.
ಸುಹಾಸ್ ಅವರ ತಂದೆ ಯತಿರಾಜ್ ತೀರಿಕೊಂಡ ನಂತರ ಕುಟುಂಬದವರು ಶಿವಮೊಗ್ಗದಲ್ಲೇ ನೆಲೆಸಿದ್ದರು. ಬಳಿಕ ಸುಹಾಸ್ ಮಂಗಳೂರಿನ ಸುರತ್ಕಲ್‌ನ ಎನ್‌ಐಟಿಕೆಯಲ್ಲಿ ಇಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿದ್ದಾರೆ. ಈ ಸಮಯದಲ್ಲೇ ಯುಪಿಎಸ್‌ಸಿ ಪರೀಕ್ಷೆಗೆ ಕಠಿಣ ಸಿದ್ಧತೆ ನಡೆಸಿ 2007ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿ ಆಯ್ಕೆಯಾದರು. ಆರಂಭದಿಂದಲೂ ಕ್ರೀಡೆಯಲ್ಲಿ ಅತೀವ ಆಸಕ್ತಿ ಹೊಂದಿದ್ದ ಸುಹಾಸ್, ಪ್ಯಾರಾಲಿಂಪಿಕ್‌ನಲ್ಲಿ ಬೆಳ್ಳಿಪದಕ ಗೆದ್ದು ವಿಶೇಷ ಸಾಧನೆ ಮಾಡಿದ್ದಾರೆ.
ಇಂದು ಬೆಳಗ್ಗೆ ಪುರುಷರ ಸಿಂಗಲ್ಸ್ ವಿಭಾಗದ ಬ್ಯಾಡ್ಮಿಂಟನ್ನಲ್ಲಿ ಇವರು ಬೆಳ್ಳಿ ಪದಕವನ್ನು ಕೊರಳಿಗೆ ಧರಿಸಿಕೊಳ್ಳುತ್ತಿದ್ದಂತೆ ಎಲ್ಲೆಡೆ ಸಂಭ್ರಮಾಚರಣೆ ಮನೆ ಮಾಡಿತ್ತು. ಸಿಹಿ ಹಂಚಿ ಸಂಭ್ರಮ ಕಂಡುಬಂತು. ಜೊತೆಗೆ ನಮ್ಮ ಮನೆಮಗನೇ ಗೆದ್ದಂತಹ ಖುಷಿಯಾಗುತ್ತಿದೆ ಎಂದು ಶಿವಮೊಗ್ಗದ ಮಂದಿ ಸಂತಸಪಟ್ಟರು.