ಶಿವಮೊಗ್ಗ: ಗೋಡೆಗಳ ಮೇಲೆ ಬರಹ ಬರೆಯುವಂತವರು ಹೇಡಿಗಳು ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಗೋಡೆ ಬರಹ ಬರೆದವರ ವಿರುದ್ಧ ಕಿಡಿಕಾರಿದ್ದಾರೆ.
ಶಿವಮೊಗ್ಗದಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಅವರು, ಪಿಎಫ್ಐನವರು ಎದುರಿಗೆ ಬಂದು ಯಾವತ್ತೂ ಏನು ಮಾಡಲ್ಲ. ರಾತ್ರಿ ಹೊತ್ತು ಒಬ್ಬೊಬ್ಬರೇ ಇದ್ದಾಗ ಬಂದು ಕೊಲೆ ಮಾಡುತ್ತಾರೆ. ಯಾರು ಇಲ್ಲದ ಜಾಗ ನೋಡಿ ಬಾಂಬ್ ಹಾಕೋದೇ ಅವರ ಕೆಲಸವಾಗಿದೆ. ರಾತ್ರಿ ಹೊತ್ತು ಬರಹ ಬರೆದು ಕಣ್ಣುತಪ್ಪಿಸಿ ಹೋಗುವ ಹೇಡಿತನದ ಕೆಲಸವನ್ನು ಪಿಎಫ್ಐ ಮಾಡುತ್ತಿದೆ ಎಂದು ಆರೋಪಿಸಿದರು.
ಅವರಿಗೆ ದೇಶದ ಬಗ್ಗೆ ಕಲ್ಪನೆ ಇಲ್ಲ. ದೇಶ ಅಭಿವೃದ್ಧಿ ಆಗಬೇಕೆಂಬುದು ಇಲ್ಲ. ಒಟ್ಟಾರೆಯಾಗಿ ದೇಶದ್ರೋಹಿ ಕೆಲಸ ಮಾಡಬೇಕು, ಗಲಭೆ ಎಬ್ಬಿಸಬೇಕು ಎಂಬುದೇ ಅವರ ಮುಖ್ಯ ಉದ್ದೇಶ. ಇದು ಬಹಳ ದಿನ ನಡೆಯುವುದಿಲ್ಲ. ಈಗಾಗಲೇ ಪಿಎಫ್ಐ ಎಂಬ ದೇಶದ್ರೋಹಿ ಸಂಘಟನೆಯನ್ನು ಬ್ಯಾನ್ ಮಾಡಿದ್ದೇವೆ. ಸ್ವಾತಂತ್ರ್ಯ ಬಂದ ದಿನದಿಂದಲೂ ಕಾಂಗ್ರೆಸಿಗರು ಪಿಎಫ್ಐ ರಾಷ್ಟ್ರದ್ರೋಹಿ ಚಟುವಟಿಕೆಗೆ ಬೆಂಬಲಿಸಿದ್ದರು. ಇದೀಗ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಂತಹ ಹುಲಿಗಳ ಕೈಯಲ್ಲಿ ಆಡಳಿತವಿದೆ. ಹೀಗಾಗಿ ಇಲಿಗಳ ರೂಪದಲ್ಲಿರುವ ಪಿಎಫ್ಐ ಅನ್ನು ಮಟ್ಟ ಹಾಕುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದರು.
ಇನ್ನು ಈ ಬಗ್ಗೆ ಸಂಸದ ಬಿ ವೈ ರಾಘವೇಂದ್ರ ಅವರು ಮಾತನಾಡಿ, ದೇಶ ವಿರೋಧಿ ಚಟುವಟಿಕೆ ಮಾಡುತ್ತಿರುವ ಸಂಘಟನೆಗಳನ್ನು ತುದಿ ಮುಟ್ಟಿಸುವ ಸಂಕಲ್ಪ ಮಾಡಿದ್ದೇವೆ ಎಂದರು. ಪಿಎಫ್ಐ, ಸಿಎಫ್ಐ ಬ್ಯಾನ್ ಬಳಿಕ ಅದನ್ನು ಪ್ರಶ್ನಿಸಿ ಕೆಲವರು ಕೋರ್ಟ್ಗೆ ಹೋಗಿದ್ದರು. ಕೋರ್ಟ್ ಕೂಡಾ ಸರ್ಕಾರದ ಕ್ರಮವನ್ನು ಎತ್ತಿಹಿಡಿದಿದೆ. ಅಲ್ಲದೇ ದೇಶ ವಿರೋಧಿ ಕೆಲಸ ಈಗಲೂ ಅಲ್ಲೊಂದು ಇಲ್ಲೊಂದು ನಡೆಯುತ್ತಿವೆ. ಇದಕ್ಕೆ ಉದಾಹರಣೆಯಾಗಿ ಶಿರಾಳಕೊಪ್ಪದ ಗೋಡೆ ಬರಹ ಸಾಕ್ಷಿಯಾಗಿದೆ. ಈ ಬಗ್ಗೆ ಶಿರಾಳಕೊಪ್ಪ ಠಾಣೆಯಲ್ಲಿ ಸುಮೋಟೋ ಕೇಸ್ ದಾಖಲಾಗಿದೆ. ಮುಸ್ಲಿಂ ಸಮುದಾಯದ ಹಿರಿಯರೇ ದೇಶ ವಿರೋಧಿ ಚಿಂತನೆಯನ್ನು ಸರಿ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಈ ಬಗ್ಗೆ ಕಾನೂನು ಚೌಕಟ್ಟಿನಲ್ಲಿ ಸರ್ಕಾರ ಉಗ್ರವಾದ ಕ್ರಮ ಕೈಗೊಳ್ಳುತ್ತದೆ ಎಂದರು.
ಇದನ್ನೂ ಓದಿ:ನಿಷೇಧಿತ PFI-CFI ಸೇರುವಂತೆ ಶಿರಾಳಕೊಪ್ಪದಲ್ಲಿ ವಿವಾದಾತ್ಮಕ ಗೋಡೆ ಬರಹ